ಹೊರಗಿನ ಮೆಡಿಕಲ್‌ಗಳಿಂದ ಔಷಧಿ-ಮಾತ್ರೆ ತರಲು ಚೀಟಿ ಏಕೆ?: ಬಸವಂತಪ್ಪ ಕಿಡಿ

KannadaprabhaNewsNetwork | Published : Apr 8, 2025 12:30 AM

ಸಾರಾಂಶ

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಕೆಲ ಕಡೆ ವೈದ್ಯರು ಔಷಧಿ ಲಭ್ಯ ಎಂದು ಹೊರಗಿನಿಂದ ಔಷಧಿ-ಮಾತ್ರೆ ತರಲು ಚೀಟಿಗಳನ್ನು ಬರೆದು ಕೊಡುತ್ತಿದ್ದಾರೆ. ಇಂಥದ್ದಕ್ಕೆ ತಾಲೂಕು ಆರೋಗ್ಯಾಧಿಕಾರಿ ಅವಕಾಶ ಕೊಡದೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದ್ದಾರೆ.

- ಎಲ್ಲ ಪಿಎಚ್‌ಸಿಗಳನ್ನು ಪರಿಶೀಲಿಸಿ ವರದಿ ನೀಡಲು ಟಿಎಚ್ಒಗೆ ತಾಕೀತು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಕೆಲ ಕಡೆ ವೈದ್ಯರು ಔಷಧಿ ಲಭ್ಯ ಎಂದು ಹೊರಗಿನಿಂದ ಔಷಧಿ-ಮಾತ್ರೆ ತರಲು ಚೀಟಿಗಳನ್ನು ಬರೆದು ಕೊಡುತ್ತಿದ್ದಾರೆ. ಇಂಥದ್ದಕ್ಕೆ ತಾಲೂಕು ಆರೋಗ್ಯಾಧಿಕಾರಿ ಅವಕಾಶ ಕೊಡದೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದರು.

ನಗರದ ಪಶು ಆಸ್ಪತ್ರೆ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ತಾ.ಪಂ. ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರವು ಪಿಎಚ್‌ಸಿಗಳ ಕಚೇರಿ ನಿರ್ವಹಣೆಗೆ ನೀಡುವ ₹1.75 ಲಕ್ಷ ಹಣವನ್ನು ವೈದ್ಯಾಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೊರಗಡೆಯಿಂದ ತರಲು ಔಷಧ ಚೀಟಿ ಬರೆದುಕೊಡುತ್ತಿರುವ ಪಿಎಚ್‌ಸಿಗಳ ವೈದ್ಯರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ. ಜನರ ಜೀವನದ ಜೊತೆಗೆ ಚೆಲ್ಲಾಟ ಆಡಬೇಡಿ. ತಕ್ಷಣವೇ ಎಲ್ಲ ಪಿಎಚ್‌ಸಿಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿ, ವರದಿ ನೀಡಿ. ಖಾಸಗಿ ನರ್ಸಿಂಗ್ ಹೋಂ ಮುಖ್ಯಸ್ಥರ ಸಭೆ ಕರೆಯಿರಿ ಎಂದು ಟಿಎಚ್‌ಒಗೆ ಸೂಚನೆ ನೀಡಿದರು.

ಶಾಲಾ ಮಕ್ಕಳಿಗೆ ನಿತ್ಯ ಸರ್ಕಾರ 5 ಮೊಟ್ಟೆ ಕೊಡುತ್ತಿದೆ. ಆದರೆ, ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿಲ್ಲ. ಒಂದು ದಿನ ಕೊಟ್ಟರೆ ವಾರ ಕೊಡುವುದಿಲ್ಲ. ಬದಲಾಗಿ ಶೇಂಗಾ ಚೆಕ್ಕಿ ನೀಡುತ್ತಿದ್ದಾರೆ. ಖುದ್ದಾಗಿ ತಾವೇ ಭೇಟಿ ನೀಡಿದಾಗ ಮಕ್ಕಳು ಈ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಬಿಇಒಗಳು ಗಮನ ಹರಿಸಬೇಕು. ಕುಕ್ಕುಟೋದ್ಯಮ ಸಂಘದೊಂದಿಗೆ ಚರ್ಚಿಸಿ ಸರ್ಕಾರದ ದರಕ್ಕಿಂತ ಕಡಿಮೆ ದರಕ್ಕೆ ಮೊಟ್ಟೆ ಕೊಡಿಸುವುದಾಗಿ ಪಶು ವೈದ್ಯಕೀಯ ಅಧಿಕಾರಿ ತಿಳಿಸಿದ್ದು, ಈ ಬಗ್ಗೆ ದಕ್ಷಿಣ-ಉತ್ತರ ಬಿಇಒಗಳು ಕ್ರಮ ಕೈಗೊಳ್ಳಿ ಎಂದು ಅವರು ತಿಳಿಸಿದರು. ಕೃಷಿ ಅಧಿಕಾರಿ ಮಾತನಾಡಿ, 1852 ರೈತರಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ 2853 ಹೆಕ್ಟೇರ್‌ನಲ್ಲಿ ರಾಗಿ, ಹಲಸಂದೆ ಬಿತ್ತನೆಯಾಗಿದೆ. ಕಳೆದ ವರ್ಷ ಕೇವಲ 450-500 ಹೆಕ್ಟೇರ್‌ಗಷ್ಟೇ ಸೀಮಿತವಾಗಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ಇಳುವರಿ ಬರುವ ಸಾಧ್ಯತೆ ಇದೆ ಸಭೆಗೆ ಮಾಹಿತಿ ನೀಡಿದರು.ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ತಹಸೀಲ್ದಾರ್ ಡಾ.ಅಶ್ವತ್ಥ್, ತಾಪಂ ಇಓ ರಾಮ ಭೋವಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು. 42 ಗ್ರಾಪಂಗಳಲ್ಲಿ 8 ಗ್ರಾಪಂಗಳು ಶೇ.100ರಷ್ಟು ಕರ ವಸೂಲಿ ಮಾಡಿದ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಶಾಸಕ ಕೆ.ಎಸ್.ಬಸವಂತಪ್ಪ ಸನ್ಮಾನಿಸಿದರು. ನರೇಗಾ ಅನುಷ್ಠಾನದಲ್ಲಿ ಪ್ರಗತಿ ಸಾಧಿಸಿದ ತಾಪಂಗೆ ಅಭಿನಂದಿಸಿದರು.

- - - (ಬಾಕ್ಸ್‌)

* ತಬ್ಬಿಬ್ಬಾದ ಅಧಿಕಾರಿ!

ದಾವಣಗೆರೆ: ಕಳೆದ 4 ವರ್ಷದಿಂದ ಎಲ್ಲೆಲ್ಲಿ ಸಸಿಗಳನ್ನು ನೆಟ್ಟಿದ್ದೀರಿ, ಎಲ್ಲೆಲ್ಲಿ ಇಂಗುಗುಂಡಿಗಳನ್ನು ತೋಡಿಸಿದ್ದೀರಿ, ಎಷ್ಟೆಷ್ಟು ಗಿಡಗಳನ್ನು ಬೆಳೆಸಿದ್ದೀರಿ, ಎಲ್ಲೆಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೀರಿ, ಎಷ್ಟೆಷ್ಟು ಹಣ ಖರ್ಚಾಗಿದೆ. ಈ ಬಗ್ಗೆ ಸಮಗ್ರ ವರದಿ ಕೊಡುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಪ್ರಶ್ನಿಸುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿ ಕ್ಷಣ ಕಕ್ಕಾಬಿಕ್ಕಿಯಾಗಿ ತಡವರಿಸಿದರು.

- - -

-7ಕೆಡಿವಿಜಿ5: ದಾವಣಗೆರೆಯಲ್ಲಿ ತಾಪಂ ಪ್ರಗತಿ ಪರಿಶೀಲನಾ ಸಭೆ ವೇಳೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಲೂಕಿನ 42 ಗ್ರಾಪಂ ಪೈಕಿ 8 ಗ್ರಾಪಂ ಶೇ.100 ಕರ ವಸೂಲಿ ಮಾಡಿದ ಹಿನ್ನೆಲೆ ಪಿಡಿಒಗಳನ್ನು ಸನ್ಮಾನಿಸಿದರು. -7ಕೆಡಿವಿಜಿ6: ದಾವಣಗೆರೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ತಾಪಂ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Share this article