ವಕೀಲ ದೇವರಾಜೇಗೌಡ, ಸಂಸದ ಪ್ರಜ್ವಲ್ ಬಂಧನಕ್ಕೆ ಆಗ್ರಹ । ಡಿಸಿ ಸತ್ಯಭಾಮಗೆ ಮನವಿ । ಎಸ್‌ಐಟಿ ತನಿಖೆ ದಿಕ್ಕು ತಪ್ಪಿಸುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಹಾಸನಪೆನ್ಡ್ರೈವ್ ಪ್ರಕರಣದ ಮುಖ್ಯ ರುವಾರಿ ಬಿಜೆಪಿ ಮುಖಂಡ ದೇವರಾಜೇಗೌಡ ಹಾಗೂ ವಿದೇಶದಲ್ಲಿ ತಲೆಮರಿಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲೆಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು. ಬಳಿಕ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಮಾತನಾಡಿ, ‘ಪೆನ್‌ಡ್ರೈವ್ ಪ್ರಕರಣದ ಮುಖ್ಯ ರುವಾರಿ ಹೊಳೆನರಸಿಪುರದ ಬಿಜೆಪಿಯ ಪರಾಜಿತ ಅಭ್ಯರ್ಥಿದೇವರಾಜೇಗೌಡರಾಗಿದ್ದು, ದಿನಕ್ಕೊಂದು ಹೇಳಿಕೆ ಕೊಡುತ್ತ, ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನ ಪ್ರಮುಖ ನಾಯಕರ ವಿರುದ್ಧ ವಿನಾಕಾರಣ ಅರೋಪ ಮಾಡುತ್ತ, ಅವರನ್ನು ತೇಜೋವಧೆ ಮಾಡುವ ಮೂಲಕ ಹಲವಾರು ಜನರನ್ನು ಬ್ಲಾಕ್‌ಮೇಲ್ ಮಾಡಿ ವಂಚಿಸಿ, ನಾನೇ ದೊಡ್ಡ ನಾಯಕ ಎಂಬಂತೇ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳಿನ ಸರಮಾಲೆಯನ್ನು ಸೃಷ್ಟಿ ಮಾಡುತ್ತ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಕಳೆದ ೨ ವರ್ಷದಿಂದ ನನ್ನ ಬಳಿ ಪೆನ್‌ಡ್ರೈವ್ ಇದೆ ಎಂದು ಹೇಳುತ್ತ ಹಲವಾರು ಹೆಣ್ಣುಮಕ್ಕಳ ಜೀವನವನ್ನು ಹಾಳು ಮಾಡಿ ಅವರ ಮಾನ ಮರ್ಯಾದೆ ಬೀದಿಗೆ ತಂದು ಈಗ ಕಪಟ ನಾಟಕವಾಡುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಹಾಗು ಕರ್ನಾಟಕ ಸರ್ಕಾರವು ಕೂಡಲೇ ಇವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದರೆ ಎಲ್ಲಾ ಸತ್ಯಾಂಶವು ಹೊರಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿರುವುದಕ್ಕೆ ಪರೋಕ್ಷವಾಗಿ ಬಿಜೆಪಿ ಕಾರಣವಾಗಿದೆ. ನಿಮ್ಮ ಕೇಂದ್ರ ಸರ್ಕಾರವು ಈ ಕೂಡಲೇ ಪ್ರಜ್ವಲ್ ರೇವಣ್ಣ ಇರುವ ಸ್ಥಳವನ್ನು ಪತ್ತೆ ಮಾಡಿ ಭಾರತಕ್ಕೆ ಕರೆತಂದು ಎಸ್‌ಐಟಿ ಮುಂದೆ ಹಾಜರುಪಡಿಸಬೇಕು’ ಎಂದು ಮನವಿ ಮಾಡಿದರು.
‘ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡಿದ್ದಾರೆ. ಜತೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡ ಮನ ಬಂದಂತೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ನೈತಿಕತೆ ಇದ್ದರೆ ತನ್ನ ಅಣ್ಣನ ಮಗನಾದ ಪ್ರಜ್ವಲ್ ರೇವಣ್ಣ ಅವರನ್ನು ಕರೆಸಿ ತನಿಖೆಗೆ ಸಹಕಾರ ನೀಡಬೇಕು. ಅದನ್ನು ಬಿಟ್ಟು ಸುಖಾಸುಮ್ಮನೆ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಕುಮಾರಸ್ವಾಮಿ ಈ ಮೊದಲು ಪ್ರಜ್ವಲ್ ನನ್ನ ಮಗ. ಆತನ ತಪ್ಪುಗಳನ್ನು ಕ್ಷಮಿಸಿ ಎಂದು ಚುನಾವಣಾ ಪ್ರಚಾರದ ವೇಳೆ ಕೇಳಿದ್ದರು. ಆದರೆ ಇದೀಗ ಅವರಿಗೂ ನಮಗೂ ಸಂಬಂಧ ಇಲ್ಲ. ನಮ್ಮ ಕುಟುಂಬವೇ ಬೇರೆ, ಅವರ ಕುಟುಂಬವೇ ಬೇರೆ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಾರೆ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿ ಮನ ಬಂದಂತೆ ಹೇಳಿಕೆ ನೀಡುವುದನ್ನು ಬಿಡಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್, ತಾರ ಚಂದನ್, ಗೊರೂರು ರಂಜಿತ್, ರಾಮಚಂದ್ರ, ಮಲ್ಲಿಗೆವಾಳ್ ದೇವಪ್ಪ, ಸಮೀರ್, ಪ್ರಕಾಶ್, ಅನು, ನವೀನ್ ಇದ್ದರು.