ಕನ್ನಡಪ್ರಭ ವಾರ್ತೆ ಕುಶಾಲನಗರ
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಕಿಡಿಗೇಡಿಗಳು ಮಾಡುತ್ತಿರುವ ಅಪಪ್ರಚಾರ ಹಾಗೂ ಅವಹೇಳನ ಖಂಡಿಸಿ, ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಆಶ್ರಯದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕುಶಾಲನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಯಿತು.ಪಟ್ಟಣದ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನ ಬಳಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದ್ದು, ಭಕ್ತ ವೃಂದ ಕೈಯಲ್ಲಿ ಬ್ಯಾನರ್ , ವಿವಿಧ ಘೋಷಣೆಗಳ ನಾಮಫಲಕಗಳನ್ನು ಹಿಡಿದು ಅಪಚಾರ ಎಸಗುತ್ತಿರುವ ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.ಬೇಕೆ ಬೇಕು ನ್ಯಾಯ ಬೇಕು, ಧರ್ಮ ದೇವರ ರಕ್ಷಣೆ ನಮ್ಮ ಹೊಣೆ, ಪೂಜ್ಯ ಹೆಗ್ಗಡೆ ಅವರ ಜೊತೆ ನಾವಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಯವಾಗಲಿ. ಸುಳ್ಳು ಆರೋಪ, ಅವಹೇಳನ ನಿಲ್ಲಿಸಿ, ವಿನಾಕಾರಣ ಕ್ಷೇತ್ರದ ಮೇಲೆ ಗೊಂದಲ ಹೇಳಿಕೆ ಅಪಚಾರ ಮಾಡುತ್ತಿರುವ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ತಂಡದ ಸದಸ್ಯರು ಹಾಗೂ ನಕಲಿ ಯೂಟ್ಯೂಬರ್ಸ್ ಗಳನ್ನು ಬಂಧಿಸಿ, ಶಕ್ತಿ ನಂಬಿಕೆ, ಆರಾಧನೆ ಶಕ್ತಿ ಪೀಠ ಧರ್ಮಸ್ಥಳ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಕುಶಾಲನಗರ ಶ್ರೀ ಗಣಪತಿ ದೇವಾಲಯ ಮುಂಭಾಗ ಬಂದು ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದರು.ಧಿಕ್ಕಾರ ಕೂಗಿ ಆಕ್ರೋಶ:ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು. ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಶನಿವಾರಸಂತೆ ಬಳಿಯ ಮುಳ್ಳೂರು ಮಠದ ಶ್ರೀ ಬಸವಲಿಂಗ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಅನಾದಿ ಕಾಲದಿಂದಲೂ ಹಿಂದೂ ಧಾರ್ಮಿಕ ಕೇಂದ್ರ, ಮಠಮಾನ್ಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪಿತೂರಿ ನಡೆಯುತ್ತಿದೆ. ಹಿಂದಿನಿಂದಲೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಅಪಪ್ರಚಾರ ಮಾಡುತ್ತಿದ್ದು ಇದರಿಂದ ಭಕ್ತರು ಆಕ್ರೋಶ ಗೊಳ್ಳುವಂತಾಗಿದೆ. ಆದರೆ ಭಕ್ತರಿಗೆ ಕ್ಷೇತ್ರದ ಬಗ್ಗೆ ಭಕ್ತಿಶ್ರದ್ಧೆ ಕಡಿಮೆಯಾಗುವುದಿಲ್ಲ ಎಂಬುದು ತಿಳಿಯಬೇಕು ಎಂದರು.
ವೈಚಾರಿಕತೆ ಹೆಸರಿನಲ್ಲಿ ದಾಳಿ:ಧಾರ್ಮಿಕ ಕ್ಷೇತ್ರಗಳ ಮೇಲೆ ವೈಚಾರಿಕತೆ ಹೆಸರಿನಲ್ಲಿ ದಾಳಿ ನಡೆಸಲಾಗುತ್ತಿದೆ. ಪುಣ್ಯಕ್ಷೇತ್ರ ಧಾರ್ಮಿಕ ವೈಚಾರಿಕತೆ ಮುಂದಿಟ್ಟುಕೊಂಡು ದಾಳಿ ಮಾಡಿದರೂ ಹಿಂದೂ ಧರ್ಮ ಅಳಿಸಲು ಸಾಧ್ಯವಿಲ್ಲ ಎಂದು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್ಸ್ಗಳಿಗೆ ಕ್ಷೇತ್ರದ ಶ್ರೀ ಮಂಜುನಾಥ ಹಾಗೂ ಅಣ್ಣಪ್ಪಸ್ವಾಮಿ ತಕ್ಕ ಶಿಕ್ಷೆ ನೀಡಿ ಅವರನ್ನು ನಾಶ ಮಾಡುವ ದಿನಗಳು ಮುಂದೆ ಬರಲಿವೆ ಎಂದು ಎಚ್ಚರಿಕೆ ನೀಡಿದರು. ಇದು ಹಿಂದಿನ ಕಾಲ ಅಲ್ಲ. ಈಗ ಮಾಡಿದ ಕರ್ಮ ಈಗಲೇ ಶಿಕ್ಷೆಯನ್ನು ಅನುಭವಿಸಬೇಕು. ಖಂಡಿತ ಅಣ್ಣಪ್ಪಸ್ವಾಮಿ ಶಿಕ್ಷೆ ಕೊಡುತ್ತಾನೆ ಎಂಬ ನಂಬಿಕೆ ನಮಗಿದೆ ಎಂದರು.
ಸ್ವಾವಲಂಬಿ ಬದುಕಿಗೆ ಕಾರಣರಾಗಿದ್ದಾರೆ:ಕೊಡಗು ಜನಜಾಗೃತಿ ವೇದಿಕೆ ಸದಸ್ಯ ನಿಸರ್ಗ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಗಳ, ದೇವಾಲಯಗಳ, ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುತ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೂಲಕ ಕೋಟ್ಯಾಂತರ ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಹೆಗ್ಗಡೆ ಅವರು ಕಾರಣರಾಗಿದ್ದಾರೆ ಎಂದು ಅಂಕಿಅಂಶಗಳ ಮೂಲಕ ಮಾಹಿತಿ ನೀಡಿದರು.ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪುಂಡರೀಕಾಕ್ಷ ಮಾತನಾಡಿ, ಧರ್ಮಸ್ಥಳ ಹಾಗೂ ಹೆಗ್ಗಡೆ ಅವರ ಬಗ್ಗೆ ಅನ್ಯಧರ್ಮಿಯ ಕೆಲವು ಪುಂಡರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ಖಂಡಿಸುತ್ತೇವೆ.
ಧಾರ್ಮಿಕ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮುಖ್ಯಮಂತ್ರಿಗಳಿಗೆ ಮನವಿ ಪತ್ರ :ಕಾರ್ಯಪ್ಪ ವೃತ್ತದಿಂದ ರಥಬೀದಿ ಮೂಲಕ ಮೆರವಣಿಗೆ ತೆರಳಿ ತಹಸೀಲ್ದಾರ್ ಕಚೇರಿ ಮೂಲಕ ವೇದಿಕೆಯ ಉಪಾಧ್ಯಕ್ಷರಾದ ವಿ ಡಿ ಪುಂಡರಿಕಾಕ್ಷ ಮತ್ತು ಸದಸ್ಯರಾದ ಕೆ ಎಸ್ ರಾಜಶೇಖರ್ ಮತ್ತಿತರರು ಭಕ್ತಾಭಿಮಾನಿಗಳ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ವೇದಿಕೆ ಸದಸ್ಯರಾದ ಎ.ಎಸ್.ಚಂದ್ರಶೇಖರ್ ಆವರ್ತಿ, ಎಚ್.ಎಂ. ಚಂದ್ರು, ಎಸ್.ಕೆ.ಸತೀಶ್, ಕೆ.ಎಸ್.ರಾಜಶೇಖರ್, ಎಂ.ಎನ್. ಚಂದ್ರಮೋಹನ್, ವಿವಿಧ ಸಂಘಟನೆಗಳ ಮುಖಂಡರಾದ ಬಿ.ಆರ್.ನಾಗೇಂದ್ರ ಪ್ರಸಾದ್, ಮನುನಂಜುಂಡ, ಬೋಸ್ ಮೊಣ್ಣಪ್ಪ, ಕೊಡಗನ ಹರ್ಷ ಎಂ.ಎಂ.ಚರಣ್, ಎಚ್.ಎಂ.ಮಧುಸೂದನ್, ಎಂ.ಎಸ್.ಶಿವಾನಂದ, ಅಮೃತ್ ರಾಜ್ ಹಿಂದೂಪರ ಸಂಘಟನೆಗಳ ಪ್ರಮುಖರಾದ ಡಿ ಸಂತೋಷ್, ರಮೇಶ್ ಬೊಟ್ಟು ಮನೆ, ಜನಾರ್ದನ್, ಎಂ ಡಿ ಕೃಷ್ಣಪ್ಪ, ಮಂಜುನಾಥ್, ಪ್ರವೀಣ್, ಧರ್ಮ, ಹರ್ಷ, ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.