ಅಪಾರ ಪ್ರಮಾಣದ ವನ್ಯಜೀವಿ ಉತ್ಪನ್ನ ಪತ್ತೆ, ಇಬ್ಬರು ವಶಕ್ಕೆ

KannadaprabhaNewsNetwork |  
Published : Sep 10, 2026, 02:00 AM IST
ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ವನ್ಯಜೀವಿ ಉತ್ಪನ್ನ. | Kannada Prabha

ಸಾರಾಂಶ

ವಶಪಡಿಸಿಕೊಂಡಿರುವ ವನ್ಯಜೀವಿ ಉತ್ಪನ್ನಗಳ ಮೂಲ ಯಾವುದು, ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬ ಕುರಿತು ಅರಣ್ಯ ಸಂಚಾರಿ ದಳ ತನಿಖೆ ಮುಂದುವರಿದಿದೆ.

ಯಲ್ಲಾಪುರ: ಪ್ಯಾಂಗೋಲಿನ್ ಚಿಪ್ಪು, ಹುಲಿ ಹಾಗೂ ಚಿರತೆಯ ಉಗುರು- ಹಲ್ಲು ಸೇರಿದಂತೆ ಅಕ್ರಮವಾಗಿ ವನ್ಯಜೀವಿ ಉತ್ಪನ್ನ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸಹಿತ ಮಾಲನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಚಂದಗುಳಿ ಗ್ರಾಪಂ ವ್ಯಾಪ್ತಿಯ ಉಪಳೇಶ್ವರದಲ್ಲಿ ಮಂಗಳವಾರ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಶಿರಸಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವನ್ಯಜೀವಿ ಉತ್ಪನ್ನ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ೪ ಜನ ತಲೆಮರೆಸಿಕೊಂಡಿದ್ದಾರೆ ಎಂದು ಯಲ್ಲಾಪುರ ವಲಯಾರಣ್ಯಾಧಿಕಾರಿ ಎಂ.ಎಸ್. ನಾಯ್ಕ ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ೧೫.೭೪೮ ಕೆಜಿ ಪ್ಯಾಂಗೋಲಿನ್(ಚಿಪ್ಪುಹಂದಿ) ಚಿಪ್ಪುಗಳು, ಎರಡು ಭಾರತೀಯ ಕಾಡೆಮ್ಮೆ ಕೊಂಬುಗಳು, ೮ ಹುಲಿ ಉಗುರುಗಳು, ೨ ಹುಲಿ ಹಲ್ಲುಗಳು, ೧೨ ಚಿರತೆ ಉಗುರುಗಳು, ೩ ಚಿರತೆ ಹಲ್ಲುಗಳು, ೬ ಕಾಡುಹಂದಿ ಹಲ್ಲುಗಳನ್ನು ಹಾಗೂ ಇವುಗಳ ಸಾಗಾಟಕ್ಕೆ ಬಳಸಲಾದ ಒಂದು ಬೈಕ್ ಹಾಗೂ ಒಂದು ಸ್ಕೂಟರ್ ಅನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ವಶಪಡಿಸಿಕೊಂಡಿರುವ ವನ್ಯಜೀವಿ ಉತ್ಪನ್ನಗಳ ಮೂಲ ಯಾವುದು, ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬ ಕುರಿತು ಅರಣ್ಯ ಸಂಚಾರಿ ದಳ ತನಿಖೆ ಮುಂದುವರಿದಿದೆ. ಪ್ರಕರಣವು ಕೇವಲ ಇಬ್ಬರ ಕೃತ್ಯಕ್ಕೆ ಸೀಮಿತವಾಗಿದೆಯೇ ಅಥವಾ ಇದರ ಹಿಂದೆ ದೊಡ್ಡ ಮಟ್ಟದ ವನ್ಯಜೀವಿ ಕಳ್ಳಸಾಗಣೆ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ. ಅಲ್ಲದೇ ಹೆಚ್ಚಿನ ತನಿಖೆಗೆ ಯಲ್ಲಾಪುರ ಅರಣ್ಯಾಧಿಕಾರಿಗಳಿಗೆ ಈ ಪ್ರಕರಣವನ್ನು ಹಸ್ತಾಂತರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಎಪಿಸಿಸಿಎಫ್‌ ಮನೋಜ್ ತ್ರಿಪಾಠಿ, ಅಪರಾಧ ನಿಯಂತ್ರಣ ಘಟಕದ ಡಿಸಿಎಫ್ ಸಂದೀಪ್ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ, ಎಸಿಎಫ್ ರಾಘವೇಂದ್ರ ನಾಯಕ್ ಹಾಗೂ ಆರ್‌ಎಫ್ಒ ಶಿಲ್ಪಾ ನಾಯಕ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಾಯಕನಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಕುಷ್ಟಗಿ ತಾಲೂಕು ಬರಪೀಡಿತ ಘೋಷಣೆಗೆ ಆಗ್ರಹ, ರೈತರ ಪಾದಯಾತ್ರೆ