ಕುಮಟಾ: ವಂದೇ ಮಾತರಂ ಗೀತೆ ಕೇವಲ ಕವಿತ್ವದ ಸಾಕಾರವಲ್ಲ, ದೇಶಭಕ್ತಿಯ ಗಂಗೆಯನ್ನು ಚಿಮ್ಮಿಸಿದ ದರ್ಶನ. ಸತ್ಯ ಮತ್ತು ಅಂತಸ್ಸತ್ವದ ಆಧಾರದಲ್ಲಿ ಹುಟ್ಟಿಕೊಂಡಿರುವುದಕ್ಕೆ ಯಾವತ್ತೂ ಮೃತ್ಯು ಇಲ್ಲ. ಹೀಗಾಗಿಯೇ ವಂದೇ ಮಾತರಂ ಗೀತೆಗೆ ಮೃತ್ಯುಂಜಯತ್ವದ ಅದ್ಭುತ ಶಕ್ತಿ ಇದೆ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.
ಪ್ರದರ್ಶನಕ್ಕಾಗಿ ಅಲ್ಲದೇ ಉದಾಹರಣೆಗಾಗಿ, ಅನುಕರಣೀಯವಾಗಿ ಈ ಸ್ಪರ್ಧೆ ನಡೆದಿದೆ. ವಂದೇಮಾತರಂ ಮಹಿಮೆಯನ್ನು ವರ್ಣಿಸುವ ಇಂಥ ಕಾರ್ಯಕ್ರಮಗಳು ಬಲವಾದ ಸಂದೇಶ ನೀಡಲಿದೆ. ವಂದೇ ಮಾತರಂಗೆ ಕಳೆದು ಹೋದ ಗೌರವ ಪುನಃ ಪ್ರಾಪ್ತವಾಗಿದೆ ಎಂಬುದಕ್ಕೆ ಸಾಕ್ಷಿ ಈ ಕಾರ್ಯಕ್ರಮ. ರಾಷ್ಟ್ರೀಯ ಪುನರ್ ಸ್ವೀಕಾರ್ಯತೆಯ ಮಂಗಲ ಮುಹೂರ್ತದಲ್ಲಿ ನಡೆಯುತ್ತಿರುವ ಇಂಥ ಕಾರ್ಯಕ್ರಮಗಳು ಅಭಿನಂದನೀಯ.
ವಂದೇಮಾತರಂ ಗೀತೆಯ ವೈಭವದ ವೈಜಯಂತಿ ತಲುಪಿದ್ದು ಹಾಗೂ ನಂತರ ದಿನಗಳಲ್ಲಿ ಉಪೇಕ್ಷೆಯಿಂದ ಬದಿಗೆ ಸರಿಸಲ್ಪಟ್ಟಿದ್ದರೂ ಈಗ ಮತ್ತೆ ಪುಟಿದೆದ್ದಿದೆ. ವಂದೇಮಾತರಂ ಗೀತೆಯ ಪ್ರೇರಣೆಯಿಂದ ಬೆಳೆದ ಪ್ರಭುತ್ವ ಕೃತಜ್ಞತಾ ರೂಪವಾಗಿ ವಂದೇಮಾತರಂ ೧೫೦ ಆಚರಿಸುತ್ತಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹುಬ್ಬಳ್ಳಿ ಸ್ವರ್ಣ ಗ್ರುಪ್ ಕಂಪನಿಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ವಂದೇ ಮಾತರಂ ಗೀತೆಯ ಈ ಕಾರ್ಯಕ್ರಮ ಅರ್ಥಪೂರ್ಣ. ವಂದೇಮಾತರಂ ಅತ್ಯಂತ ರೋಮಾಂಚನಕಾರಿ. ಎಲ್ಲರೂ ಅರ್ಥವರಿತು ವಂದೇಮಾತರಂ ಗಾಯನ ಮಾಡಿ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅಶೋಕ ಪಿಕಳೆ ಮಾತನಾಡಿದರು. ವಿಶ್ವಸ್ಥ ಡಿ.ಎನ್. ಭಟ್, ಕಾರ್ಯದರ್ಶಿ ಡಾ. ಸೀತಾಲಕ್ಷ್ಮೀ ಹೆಗಡೆ ವೇದಿಕೆಯಲ್ಲಿದ್ದರು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಿರಣ ಭಟ್ ಸ್ವಾಗತಿಸಿದರು. ಉಪಪ್ರಾಚಾರ್ಯೆ ರಮ್ಯಾ ಸಭಾಹಿತ, ಇತರ ಉಪನ್ಯಾಸಕರು, ವಿದ್ಯಾರ್ಥಿ ಪ್ರತಿನಿಧಿ ಪ್ರಜ್ಞಾ ಭಟ್ ಇತರರು ಉಪಸ್ಥಿತರಿದ್ದರು. ಬಹುಮಾನ ವಿಜೇತರು: ರಾಜ್ಯಮಟ್ಟದ ವಂದೇ ಮಾತರಂ ಗೀತಗಾಯನ ಸ್ಪರ್ಧೆಯಲ್ಲಿ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟಿನ ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ ಹೆಗಡೆ ಪ್ರಥಮ ಸ್ಥಾನ ಗಳಿಸಿದರೆ, ಬೆಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಶಿವಕಾಮಿ ದ್ವಿತೀಯ ಸ್ಥಾನ ಪಡೆದಳು.
ಸ್ಪರ್ಧೆಯ ನಿರ್ಣಾಯಕರಾಗಿ ಡಾ. ಹರೀಶ ಹೆಗಡೆ, ಎಂ.ವಿ.ಶೇಷಾದ್ರಿ ಅಯ್ಯಂಗಾರ್, ಚಂದ್ರಶೇಖರ ಮಣಗಿಮನಿ ಕಾರ್ಯನಿರ್ವಹಿಸಿದರು.