ಅಂಕೋಲಾ: ಜಮೀನು ಮಾಲೀಕರಂತೆ ಬಿಂಬಿಸಿ ನಕಲಿ ವ್ಯಕ್ತಿಗಳು, ನಕಲಿ ಸಹಿ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಿ ವಂಚಿಸಿದ ಆರೋಪದಡಿ ಅಂಕೋಲಾ ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರನ್ನು ಬಾಳೆಗುಳಿಯ ಮಂಜುನಾಥ ತಂದೆ ಆನಂದು ಗೌಡ, ಪಟ್ಟಣದ ಹೊನ್ನೆಕೇರಿ ಕ್ರಾಸ್‌ನ ಶಂಕರ ರಾಮದಾಸ ಅಣ್ಟೇಕರ, ಕೃಷ್ಣಾಪುರ, ಬಾಳೆಗುಳಿಯ ಚೆನ್ನಪ್ಪ ರವಿ ತಂದೆ ಜಟ್ಟಿ ನಾಯ್ಕ, ಬೆಳಸೆಯರಾದ ದರ್ಶನ ತಂದೆ ನಾರಾಯಣ ಗೌಡ ಹಾಗೂ ಯಂಕು ತಂದೆ ಹುಲಿಯಾ ಗೌಡ(ಬೆಳಸೆ) ಎಂದು ಗುರುತಿಸಲಾಗಿದೆ. ಇವರಲ್ಲಿ ಶಂಕರ ಅಂಕೋಲಾ ಉಪನೋಂದಣಾಧಿಕಾರಿ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಿರ್ಯಾದಿದಾರರ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಅಂಕೋಲಾ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪಿರ್ಯಾದಿದಾರರು ಹಾಗೂ ಅವರ ಸಹೋದರರೇ ಎಂಬಂತೆ ನಕಲಿ ವ್ಯಕ್ತಿಗಳನ್ನು ಹಾಜರುಪಡಿಸಿ, ಸುಳ್ಳು ಸಹಿ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿ ಮಾರಾಟ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಕಾರವಾರ ಉಪವಿಭಾಗದ ಡಿವೈಎಸ್ಪಿ ಎಸ್.ವಿ. ಗಿರೀಶ್ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.