ಆಸ್ತಿ ತೆರಿಗೆ ಬಾಕಿದಾರರಿಗೆ ಭಾರಿ ರಿಯಾಯಿತಿ?; ಅತ್ಯಧಿಕ ತೆರಿಗೆ ಸಂಗ್ರಹ ಗುರಿ ಹಾಕಿಕೊಂಡ ಬಿಬಿಎಂಪಿ

KannadaprabhaNewsNetwork |  
Published : Jan 18, 2024, 02:05 AM IST
ಬಿಬಿಎಂಪಿ | Kannada Prabha

ಸಾರಾಂಶ

ಆಸ್ತಿ ತೆರಿಗೆ ಬಾಕಿದಾರರಿಗೆ ಭಾರಿ ರಿಯಾಯಿತಿ?; ಅತ್ಯಧಿಕ ತೆರಿಗೆ ಸಂಗ್ರಹ ಗುರಿ ಹಾಕಿಕೊಂಡ ಬಿಬಿಎಂಪಿ. ಸರ್ಕಾರಕ್ಕೆ ಹಲವು ತಿದ್ದುಪಡಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ ಪಾಲಿಕೆ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಹಲವಾರು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಂಪರ್‌ ಆಫರ್‌ ನೀಡುವುದರೊಂದಿಗೆ ಅತ್ಯಧಿಕ ಪ್ರಮಾಣದ ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಮಾಸ್ಟರ್‌ ಪ್ಲಾನ್‌ ರೂಪಿಸಿದೆ.

ಬಿಬಿಎಂಪಿಯೂ ಈ ಬಾರಿಗೆ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ಹಲವು ಸರ್ಕಸ್ ಮಾಡುತ್ತಿದೆ. ಇದರ ಫಲವಾಗಿ ಈಗಾಗಲೇ ಕಳೆದ ವರ್ಷಕ್ಕಿಂತ ₹500 ಕೋಟಿಗೂ ಅಧಿಕ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಿಸಿದೆ. ಇದೀಗ ಬಾಕಿ ವಸೂಲಿಗೆ ಇನ್ನಷ್ಟು ರಿಯಾಯಿತಿ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದರಲ್ಲಿ ಬಿಬಿಎಂಪಿಯ 2020ರ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಸಂಬಂಧಿಸಿದಂತೆ ಕೆಲವು ನ್ಯೂನ್ಯತೆಗಳಿಗೆ ತಿದ್ದುಪಡಿ ಸಹ ಒಳಗೊಂಡಿದೆ.

ಆಸ್ತಿ ತೆರಿಗೆಗೆ ಓಟಿಎಸ್‌ ಆಫರ್‌?:

ಬ್ಯಾಂಕ್‌ಗಳು ಸಾಲಗಾರರಿಗೆ ಓಟಿಎಸ್‌ (ಒಂದು ಕಂತಿನಲ್ಲಿ ಸಾಲ ಮರುಪಾವತಿ) ನೀಡುವ ಮಾದರಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನಿಗದಿತ ಸಮಯದಲ್ಲಿ ಬಾಕಿ ಮೊತ್ತ ಪಾವತಿಗೆ ಅವಕಾಶ ನೀಡುವುದು. ಆ ವೇಳೆ ಬಡ್ಡಿ ಅಥವಾ ದಂಡ ಮನ್ನಾ ಸೇರಿದಂತೆ ಮೊದಲಾದ ರಿಯಾಯಿತಿ ನೀಡುವ ಯೋಜನೆ ರೂಪಿಸಲಾಗಿದೆ. ಇದರಿಂದ ಹಲವಾರು ವರ್ಷದಿಂದ ಬಾಕಿ ಉಳಿದ ಆಸ್ತಿ ತೆರಿಗೆ ವಸೂಲಿ ಆಗಲಿದೆ. ಜತೆಗೆ, ಮುಂಬರುವ ವರ್ಷದಲ್ಲಿ ನಿಯಮಿತವಾಗಿ ಆಸ್ತಿ ತೆರಿಗೆ ವಸೂಲಿ ಆಗಲಿದೆ ಎಂಬುದು ಬಿಬಿಎಂಪಿ ಅಧಿಕಾರಿಗಳ ಚಿಂತನೆ ಆಗಿದೆ.

ದಂಡ ಪ್ರಮಾಣ ಇಳಿಕೆ:

ಇನ್ನು ಬಿಬಿಎಂಪಿಯ 2020ರ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಸಂಬಂಧಿಸಿದಂತೆ ಸುಸ್ತಿದಾರರಿಗೆ ಬಾಕಿ ಮೊತ್ತಕ್ಕೆ ಎರಡು ಪಟ್ಟು ದಂಡ ವಿಧಿಸುವುದು ಹಾಗೂ ಬಡ್ಡಿ ಹಾಕಲಾಗುತ್ತದೆ. ಈ ಪೈಕಿ ದಂಡ ಪ್ರಮಾಣವನ್ನು ಎರಡು ಪಟ್ಟು ಬದಲು ಒಂದು ಪಟ್ಟು ಇಳಿಸಲು ಕಾಯ್ದೆಯಲ್ಲಿ ತಿದ್ದುಪಡಿ ತೆರುವುದಕ್ಕೆ ಚರ್ಚೆ ನಡೆಸಲಾಗಿದೆ.

ಈ ಸೌಲಭ್ಯವನ್ನು ವಸತಿ ಕಟ್ಟಡಗಳಿಗೆ ಮಾತ್ರ ನೀಡುವುದಕ್ಕೆ ಚರ್ಚೆ ನಡೆಸಲಾಗಿತ್ತು. ಆದರೆ, ಇದರಿಂದ ಸಮಸ್ಯೆ ಆಗಲಿದೆ. ಹಾಗಾಗಿ, ವಸತಿ ಮತ್ತು ವಾಣಿಜ್ಯ ಕಟ್ಟಡ ಎರಡಕ್ಕೂ ಅನ್ವಯವಾಗುವಂತೆ ಕ್ರಮ ಕೈಗೊಳ್ಳುವುದಕ್ಕೆ ಚರ್ಚೆ ನಡೆಸಲಾಗಿದೆ.

ಬಡ್ಡಿ ಅಥವಾ ದಂಡ ವಸೂಲಿ:

ಬಡ್ಡಿ ಮತ್ತು ದಂಡ ಮೊತ್ತ ಹೆಚ್ಚಾಗಿದೆ. ಈ ಪ್ರಮಾಣ ಕಡಿಮೆ ಮಾಡಬೇಕೆಂದು ಆಸ್ತಿ ತೆರಿಗೆ ಸುಸ್ತಿದಾರರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನಗರದ ಶಾಸಕರು ಮತ್ತು ಸಚಿವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸುಸ್ತಿದಾರರಿಗೆ ಒಂದು ಬಾರಿ ಅವಕಾಶ ನೀಡಿ ಬಡ್ಡಿ ಅಥವಾ ದಂಡ ಮೊತ್ತವನ್ನು ಮಾತ್ರ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ, ಯಾವುದು ಎಂಬುದನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ