ರಂಜಿತಾ ಕೊಲೆ ಖಂಡಿಸಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ
ಕಾಳಮ್ಮ ನಗರದ ಮಹಿಳೆ ರಂಜಿತಾ ಕೊಲೆ ಖಂಡಿಸಿ ಹಿಂದೂ ಸಂಘಟನೆಗಳು ಭಾನುವಾರ ಕರೆ ನೀಡಿದ್ದ ಯಲ್ಲಾಪುರ ಬಂದ್‌ಗೆ ನಾಗರೀಕರಿಂದ ಅಪಾರ ಸ್ಪಂದನೆ ವ್ಯಕ್ತವಾಯಿತು.
ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಭಾನುವಾರ ಬೆಲ್ ರಸ್ತೆಯಲ್ಲಿ ನಡೆಯಬೇಕಿದ್ದ ವಾರದ ಸಂತೆಯೂ ನಡೆಯಲಿಲ್ಲ. ವಾಹನಗಳ ಓಡಾಟ, ಬಸ್ ಸಂಚಾರ ಎಂದಿನಂತೆ ಇತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. 300ಕ್ಕೂ ಹೆಚ್ಚು ಪೊಲೀಸರು ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕೊಲೆಯಾದ ಮಹಿಳೆಯ ಮಗನಿಗೆ ಊಟ, ವಸತಿ ಹಾಗೂ ಉಚಿತ ಶಿಕ್ಷಣವನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ನೀಡಲಾಗುವುದು ಎಂದು ಘೋಷಿಸಿದರು.
ಮೃತ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಕನಿಷ್ಠ ₹50 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಪ್ರಮುಖರಾದ ರಾಮು ನಾಯ್ಕ, ಶ್ಯಾಮಿಲಿ ಪಟಾಣಕರ್, ಪ್ರಸಾದ ಹೆಗಡೆ, ಗೋಪಾಲಕೃಷ್ಣ ಬಗನಗದ್ದೆ, ನಾಗೇಶ ಪತ್ತಾರ, ಗಜಾನನ ನಾಯ್ಕ ತಳ್ಳಿಕೇರಿ, ಎಸ್.ಎನ್. ಭಟ್ಟ ಏಕಾನ, ವೆಂಕಟರಮಣ ಬೆಳ್ಳಿ, ಉಮೇಶ ಭಾಗ್ವತ, ಚಿದಾನಂದ ಹರಿಜನ, ಜಗನ್ನಾಥ ರೇವಣಕರ್, ಲೋಕೇಶ ಪಾಟಣಕರ್ ಮುಂತಾದವರು ಮಾತನಾಡಿ ಘಟನೆಯನ್ನು ಖಂಡಿಸಿದರು.
500ಕ್ಕೂ ಹೆಚ್ಚು ಜನ ಸೇರಿದ್ದರು.
ಮಹಿಳೆಯ ಹತ್ಯೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್‌ಗೆ ತಾಲೂಕಿನ ಗುಳ್ಳಾಪುರದಲ್ಲೂ ಬೆಂಬಲ ನೀಡಲಾಯಿತು.
ಡೋಂಗ್ರಿ ಗ್ರಾಪಂ ಅಧ್ಯಕ್ಷ ವಿನೋದ ಭಟ್ಟ, ಸ್ಥಳೀಯ ಮುಖಂಡರಾದ ನಾಗಪತಿ ಹೆಗಡೆ, ವಿಶ್ವ ಭಟ್ಟ, ಕಮಲಾಕರ ನಾಯ್ಕ, ಚಂದು ನಾಯ್ಕ ಕೊಡ್ಲಗದ್ದೆ, ಮಹಾಬಲೇಶ್ವರ ಭಟ್ಟ, ಆರ್.ಸಿ. ಹೆಗಡೆ, ವಿ.ಎಸ್. ಭಟ್ಟ ಕಲ್ಲೇಶ್ವರ, ನಾರಾಯಣ ಹೆಗಡೆ, ಸದಾಶಿವ ಹೆಗಡೆ, ಸತೀಶ್ ಶೆಟ್ಟಿ, ರವಿ ನಾಯ್ಕ, ವಿಷ್ಣು ನಾಯ್ಕ, ರಾಘವೇಂದ್ರ ನಾಯ್ಕ, ರಾಘವೇಂದ್ರ ಶೆಟ್ಟಿ ಇತರರಿದ್ದರು.