ಮುಂಡರಗಿ: ಬುಧವಾರ ಸಂಜೆ 5.45ರಿಂದ 6 ಗಂಟೆಯ ವೇಳೆಗೆ ಗುಡುಗು ಸಿಡಿಲು ಸಹಿತ ಕೇವಲ 2- 3 ನಿಮಿಷ ಜೋರಾಗಿ ಮಳೆಯಾಗಿದ್ದು, ಈ ವೇಳೆ ರಭಸದ ಗಾಳಿ ಬೀಸಿದ್ದರಿಂದ ಪಟ್ಟಣದ ವಿವಿಧೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.ಪಟ್ಟಣದ ತುಂಗಭದ್ರಾ ನಗರದ ಉದ್ಯಾನವನದ ಸಮೀಪವಿರುವ ಲಿಂಗರಾಜ ಹಾಲಿನವರ ಮನೆಯ ಮೇಲೆ ಭಾರಿ ಮರವೊಂದು ಬಿದ್ದಿದೆ. ಅದೇ ರೀತಿ ಪಟ್ಟಣದ ಹೊಸ ಎಪಿಎಂಸಿ ಆವರಣದ ಹೊರಗಡೆಗೆ ಡಬ್ಬಾ ಅಂಗಡಿಯೊಂದರ ಮೇಲೆ ಮರ ಬಿದ್ದು, ಅಂಗಡಿಯಲ್ಲಿದ್ದ ವ್ಯಕ್ತಿ ಕೈಗೆ ಒಂದಿಷ್ಟು ಪೆಟ್ಟಾಗಿದೆ. ಶಿರಹಟ್ಟಿ ರಸ್ತೆಯ ಪಟ್ಟಣದ ವಾಯವ್ಯ ಸಾರಿಗೆ ಬಸ್ ಡಿಪೋ ರಸ್ತೆಯಲ್ಲಿರುವ ಚಹಾ ಅಂಗಡಿ, ಗ್ಯಾರೇಜ್ ಸೇರಿದಂತೆ ಅನೇಕ ಅಂಗಡಿಗಳ ತಗಡುಗಳು ಹಾರಿ ಹೋಗಿವೆ.
ನಮ್ಮ ಮನೆಯ ಮೇಲೆ ಮರ ಬಿದ್ದಿರುವ ಕುರಿತು ಪುರಸಭೆ ಅಧಿಕಾರಿಗೆ ಕರೆ ಮಾಡಿ ಅದನ್ನು ತೆಗೆಸಿ ಸ್ವಚ್ಛ ಮಾಡಿಸಿಕೊಡುವಂತೆ ವಿನಂತಿಸಿದರೆ ಅವರು ಇದು ನಮಗೆ ಸಂಬಂಧಿಸಿದ್ದಲ್ಲ, ಅರಣ್ಯ ಇಲಾಖೆಯವರಿಗೆ ಹೇಳಿ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಪುರಸಭೆಗೆ ಕರ ಕಟ್ಟುವ ನಾವು ಅರಣ್ಯ ಇಲಾಖೆಗೆ ಏಕೆ ಹೇಳಬೇಕು. ಇಂತಹ ಘಟನೆ ಸಂಭವಿಸಿದಾಗ ಪುರಸಭೆ ಸಾರ್ವಜನಿಕರ ನೆರವಿಗೆ ಬರಬೇಕು ಎಂದು ಲಿಂಗರಾಜ ಹಾಲಿನವರ ಒತ್ತಾಯಿಸಿದ್ದಾರೆ.
ಗದಗ: ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಗುರುವಾರ ರಾತ್ರಿ ಮಳೆಯಾಗಿದೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಪ್ರಾರಂಭವಾದ ಮಳೆ 15 ನಿಮಿಷಕ್ಕೂ ಹೆಚ್ಚು ಕಾಲ ಸುರಿಯಿತು. ಕಳೆದೊಂದು ವಾರದಿಂದ ಅತಿಯಾದ ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ರಾತ್ರಿ ಸುರಿದ ಮಳೆಯಿಂದಾಗಿ ಕೊಂಚ ತಂಪಿನ ವಾತಾವರಣ ನಿರ್ಮಾಣವಾಯಿತು. ಮಳೆಯೊಂದಿಗೆ ಬೀಸಿದ ಭಾರಿ ರಭಸದ ಗಾಳಿಗೆ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯವಾಗಿತ್ತು.