ಶಿರಹಟ್ಟಿ: ತಾಲೂಕಿನಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ ಸರ್ಕಾರ ೨೦.೫೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಏಪ್ರಿಲ್ ತಿಂಗಳ ಕೊನೆಯೊಳಗೆ ಶಾಲೆಗಳನ್ನು ಗುರುತಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಗುರುವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಚರ್ಚೆ ನಡೆಸಿ ಮಾತನಾಡಿದರು. ದುರಸ್ತಿಗೆ ಬಂದ ಶಾಲೆಗಳನ್ನು ಗುರುತಿಸಿ ಮೇ ಮೊದಲನೆ ವಾರದಲ್ಲಿ ನೀವು ಸಲ್ಲಿಸಿದ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಬೇಕು. ಸರ್ಕಾರದ ಅನುದಾನ ಸಮರ್ಪಕ ಬಳಕೆಗೆ ಕ್ರಮ ವಹಿಸಬೇಕು ಎಂದರು.ಶೈಕ್ಷಣಿಕವಾಗಿ ತಾಲೂಕು ಬಹಳಷ್ಟು ಹಿಂದುಳಿದಿದೆ. ಈ ಬಾರಿಯ ಪಿಯುಸಿ ಫಲಿತಾಂಶವನ್ನು ಗಮನಿಸಿದರೆ ಶೈಕ್ಷಣಿಕ ಪ್ರಗತಿ ಯಾವ ಹಂತದಲ್ಲಿದೆ ಎಂಬುದು ತಿಳಿಯುತ್ತಿದೆ. ಅದಕ್ಕಾಗಿ ಮೊದಲು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತಂದು ಮುಖ್ಯ ವಾಹಿಸಿಗೆ ತರುವ ಕೆಲಸವಾಗಬೇಕು. ಬರೀ ಎಸ್‌ಎಸ್‌ಎಲ್‌ಸಿ ಹಂತದಲ್ಲಿರುವ ಮಕ್ಕಳಿಗೆ ಬೆಳಗಿನ ಜಾವ ಬೇಗ ಎದ್ದು ಓದುವಂತೆ ಪ್ರೇರೇಪಿಸಿದರೆ ಸಾಲದು.೮, ೯, ೧೦ನೇ ತರಗತಿಯಿಂದಲೇ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಆಯಾ ಹಂತದಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮತ್ತು ಅವರಲ್ಲಿರುವ ಕಲಿಕಾ ಗುಣಮಟ್ಟ ಪರೀಕ್ಷಿಸುವ ಕಾರ್ಯ ಶಿಕ್ಷಕರಿಂದ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಫಲಿತಾಂಶ ಸುಧಾರಣೆ ಮಾಡಲು ಸಾಧ್ಯವಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆ ಅಳವಡಿಸಬೇಕು ಎಂದರು.ತಾಲೂಕಿನಲ್ಲಿ ಸ್ವಂತ ಕಟ್ಟಡ ಹೊಂದಿರುವ ೯೨ ಅಂಗನವಾಡಿ ಕೇಂದ್ರಗಳಿರುವ ಬಗ್ಗೆ ಸಿಡಿಪಿಒ ಮೃತ್ಯುಂಜಯ ಗುಡ್ಡದಾನವೇರಿ ಮಾಹಿತಿ ನೀಡುತ್ತಿದ್ದಂತೆ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಅಗತ್ಯತೆ ಪರಿಶೀಲನೆ ಮಾಡಿ ಸಿಂಟೆಕ್ಸ್, ವಿದ್ಯುತ್, ಪೈಪ್ಲೈನ್ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿ ಆರ್‌ಒ(ನೀರು ಶುದ್ಧೀಕರಣ ಯಂತ್ರ) ಅಳವಡಿಕೆಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.ಈಗಾಗಲೇ ಪೂರ್ವ ಮುಂಗಾರು ಆರಂಭವಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಅವರಿಗೆ ಎ.ಎ. ಕಂಬಾಳಿಮಠ ತಿಳಿಸಿದರು.