ಗ್ರಾಮಕ್ಕೆ ಲಗ್ಗೆಯಿಟ್ಟ ಬೃಹತ್ ಗಾತ್ರದ ಕಾಡುಪ್ರಾಣಿಗಳು

KannadaprabhaNewsNetwork |  
Published : Dec 23, 2023, 01:45 AM ISTUpdated : Dec 23, 2023, 01:46 AM IST
ಹಗರಣದಲ್ಲಿ ಪ್ರದರ್ಶನಗೊಂಡ ಕಲಾಕೃತಿ. | Kannada Prabha

ಸಾರಾಂಶ

ತಮ್ಮ ಊರಿನ ಜಾತ್ರೆಯನ್ನು ವಿಜೃಂಭಣೆಯಿಂದ, ನೋಡುಗರ ಕಣ್ಮನ ಸೆಳೆಯುವ ಉದ್ದೇಶದಿಂದ ಹಗರಣದ ಸಿದ್ಧತೆಯನ್ನು ತಿಂಗಳು ಮೊದಲಿನಿಂದೇ ಆರಂಭಿಸುತ್ತಾರೆ.

ಕಾರವಾರ:

ಬೃಹತ್ ಗಾತ್ರದ ಕಾಡು ಪ್ರಾಣಿಗಳು ಗ್ರಾಮಕ್ಕೆ ಲಗ್ಗೆ ಇಟ್ಟಿದೆ. ಆದರೆ ಗ್ರಾಮಸ್ಥರು ಭಯಬೀಳದೇ, ಕಗ್ಗಾಬಿಕ್ಕಿಯಾಗದೇ ಅವುಗಳನ್ನು ನೋಡುತ್ತಾ ನಿಂತಿದ್ದಾರೆ.

ಈ ಸುದ್ದಿ ಓದಿ ನೀವು ಆತಂಕಗೊಳ್ಳಬೇಡಿ. ತಾಲೂಕಿನ ತೋಡೂರಿನಲ್ಲಿ ಗುರುವಾರ ರಾತ್ರಿ ಗೋವಿಂದ ದೇವರ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಹಗರಣ ಎನ್ನುವ ವಿಶೇಷ ಆಚರಣೆಯಾಗಿದೆ. ಹಾಲಕ್ಕಿ, ಭಂಡಾರಿ, ಕೋಮಾರಪಂಥ, ಗುನಗಿ ಒಳಗೊಂಡು ವಿವಿಧ ಸಮಾಜದವರು ಬೃಹತ್ ಗಾತ್ರದ ಮೀನು, ಕೀಟ, ವನ್ಯಜೀವಿಗಳ ಕಲಾಕೃತಿ ತಯಾರಿಸಿಕೊಂಡು ಹಾಗೂ ಸಾಧು-ಸಂತರ, ದೇವಾದಿ-ದೇವತೆಗಳ, ದಾನವರ ವೇಷಗಳನ್ನೂ ಹಾಕಿಕೊಂಡು ದೇವಸ್ಥಾನದ ಸಮೀಪ ಇರುವ ಮೈದಾನದಲ್ಲಿ ಮೆರವಣಿಗೆ ಮಾಡುತ್ತಾರೆ. ಇದಕ್ಕೆ ಹಗರಣವೆಂದು ಕರೆಯಲಾಗುತ್ತದೆ. ಅಂಕೋಲಾ, ಕಾರವಾರ ತಾಲೂಕಿನ ವಿವಿಧೆಡೆ ಅನಾದಿಕಾಲದಿಂದಲೂ ಹಗರಣ ನಡೆದುಕೊಂಡು ಬಂದಿದೆ. ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಲಾಕೃತಿಗಳು, ಭಿತ್ತಿಚಿತ್ರಗಳು ಕೂಡಾ ಕೆಲವು ಕಡೆ ಇರುತ್ತದೆ.

ತಮ್ಮ ಊರಿನ ಜಾತ್ರೆಯನ್ನು ವಿಜೃಂಭಣೆಯಿಂದ, ನೋಡುಗರ ಕಣ್ಮನ ಸೆಳೆಯುವ ಉದ್ದೇಶದಿಂದ ಹಗರಣದ ಸಿದ್ಧತೆಯನ್ನು ತಿಂಗಳು ಮೊದಲಿನಿಂದೇ ಆರಂಭಿಸುತ್ತಾರೆ. ಇದನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ಈ ಹಗರಣವನ್ನೂ ತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದು, ಬ್ರಿಟಿಷರ ಧಮನಕಾರಿ ಆಳ್ವಿಕೆ ವಿರುದ್ಧ ಧ್ವನಿ ಎತ್ತುವ ಸಲುವಾಗಿ ಹಿಂದಿನವರು ಮಾಡುತ್ತಿದ್ದರು. ಕಾಲಾನಂತರ ಸಮಾಜದಲ್ಲಿ ಜಾಗೃತಿ ಮೂಡಿಸಲು ಇದನ್ನು ನಡೆಸಿಕೊಂಡು ಬರಲಾಗುತ್ತಿದೆ.

ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಈ ಹಗರಣದಲ್ಲಿ ಪ್ರದರ್ಶಿಸುವ ಕಲಾಕೃತಿಯನ್ನು ಸ್ಥಳೀಯ ಯುವಕರೇ ನಿರ್ಮಿಸುತ್ತಾರೆ. ಬೃಹತ್ ಗಾತ್ರದ ಕಲಾಕೃತಿಗೆ ₹ ೧೫ ಸಾವಿರ ವರೆಗೂ ವೆಚ್ಚವಾಗುತ್ತದೆ. ಆದರೆ ಯಾರ ಬಳಿಯೂ ಧನ ಸಹಾಯ ಕೇಳುವುದಿಲ್ಲ ಎಂದು ಹಾಲಕ್ಕಿ ಸಮುದಾಯದ ಯುವ ಮುಖಂಡ ವೀರಭದ್ರ ಗೌಡ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!