ನರಗುಂದ: ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕವಿತೆ ಕರ್ನಾಟಕ ಏಕೀಕರಣವಾದರೂ ಇಂದಿಗೂ ಸಮಗ್ರ ಕರ್ನಾಟಕದ ನಿರ್ಮಾಣದ ಆಶಯವನ್ನು ವ್ಯಕ್ತಪಡಿಸುತ್ತದೆ. ಇದನ್ನು ರಚಿಸಿದ ಹುಯಿಲಗೋಳ ನಾರಾಯಣರಾಯರು ಬರೆದಿರುವ ಈ ಹಾಡು ಇನ್ನೂ ಹಸಿರಾಗಿದೆ. ಅದು ಸರ್ವಕಾಲಕ್ಕೂ ಕನ್ನಡ ನಾಡಿನಲ್ಲಿ ಬೇಡಿಕೆಯ ಕನ್ನಡಾಭಿಮಾನದ ಸಂಕೇತವಾಗಿದೆ ಎಂದು ಸಾಹಿತಿ ವೀರನಗೌಡ ಮರಿಗೌಡ್ರ ಹೇಳಿದರು.
ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡ ಕುಲಕೋಟಿಯನ್ನು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಕಾವ್ಯ-ಕಹಳೆಯಿಂದ ಕೂಗಿ ಜಾಗೃತ ಮಾಡಿದ ಕವಿಪುಂಗವ ಹುಯಿಲಗೋಳ ನಾರಾಯಣರಾಯರು. ಏಕೀಕರಣಕ್ಕೆ ಹೋರಾಟ ನಡೆದಾಗ ಕನ್ನಡಿಗರಲ್ಲಿ ಸದಭಿಮಾನದ ಕಾವು ತುಂಬಿದ ಈ ಹಾಡು ಅಂದಿನ ತಾರಕ ಮಂತ್ರವಾಗಿತ್ತು. ಅವರ ಕಾವ್ಯಶಕ್ತಿಗೆ ನಮ್ಮದೊಂದು ನಮನ ಎಂದು ಅವರು ಹೇಳಿದರು.
ಮಾದಾರ ಚೆನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಎಸ್. ಸಾಲಿಮಠ ಮಾತನಾಡಿ, ನಾರಾಯಣರಾಯರು ಧಾರವಾಡದಲ್ಲಿರುವಾಗ ಮುದವೀಡು ಕೃಷ್ಣರಾಯರ ಧ್ಯೇಯ-ಧೋರಣೆಗಳಿಂದ ವಿಶೇಷವಾಗಿ ಪ್ರಭಾವಿತರಾಗಿದ್ದರು. ಅವರು ಬರೆದ ಅನೇಕ ಹೃದಯ ಮಿಡಿಯುವ ಹಾಡುಗಳು ಕನ್ನಡದ ಜನರಲ್ಲಿ ಅಭಿಮಾನದ ಕಿಡಿಯೆಬ್ಬಿಸಿ ಕನ್ನಡದ ಏಕೀಕರಣಕ್ಕೆ ಹೋರಾಡುವ ಮನೋಸ್ಥೈರ್ಯ, ಛಲವನ್ನು ನೀಡಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯಎಂ.ಎಲ್. ಪತಂಗ, ಅಬೂಬಕರ ನಾಲಬಂದ, ಮಹಾಂತೇಶ ಹಿರೇಮಠ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.