ಹಾವೇರಿ: ಈ ಭಾಗದ ಪ್ರಸಿದ್ಧ ಹುಕ್ಕೇರಿಮಠದ ಜಾತ್ರಾ ಮಹೋತ್ಸವವನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲು ಡಿ. 25ರಿಂದ ಡಿ. 30ರ ವರೆಗೆ ಹಲವಾರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಶ್ರೀಮಠ ಉತ್ತರ ಕರ್ನಾಟಕದ ಹಿರಿಯ ಮಾರ್ಗದರ್ಶಕ ಮಠ ಆಗಲಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಲ್ಲಿನ ಹುಕ್ಕೇಮಠದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಈ ಸಲ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ವಿಶೇಷವಾಗಿದೆ. ಶ್ರೀಮಠದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಹಾಗೂ ಸದಾಶಿವ ಶ್ರೀಗಳ 15ವರ್ಷಗಳ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ನಿಮಿತ್ತ ಭಕ್ತರನ್ನು ಸೇರಿಸಿ ಭಕ್ತಿ-ಭಾವದ ಸಮರ್ಪಣೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.ಈ ಭಾಗದಲ್ಲಿ 50 ವರ್ಷ ಸುದೀರ್ಘವಾಗಿ ಜಾತಿ ಭೇದ ಇಲ್ಲದೇ ಎಲ್ಲ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಟ್ಟು ಸುಸಂಸ್ಕೃತವಾದ ವಿದ್ಯಾವಂತ ಸಮುದಾಯವನ್ನು ನಿರ್ಮಿಸಲು ಮಾಡಿರುವ ಸುದೀರ್ಘ ತಪಸ್ಸಿನ ಯಶಸ್ಸಿನ ಆಚರಣೆಯೇ ಸುವರ್ಣ ಮಹೋತ್ಸವವಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅನೇಕ ರಾಜಕಾರಣಿಗಳು ಭಾಗವಹಿಸಲಿದ್ದು, ಇದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದರು.ಆಧುನಿಕತೆಯ ಪ್ರಭಾವದಲ್ಲಿ ನಮ್ಮತನ, ನಮ್ಮ ಸಂಸ್ಕಾರ, ನಮ್ಮ ಅಸ್ತಿತ್ವವನ್ನೆ ಮುಳುಗಿಸುವ ಪ್ರಭಾವದಿಂದ ಪ್ರಕೃತಿಯೇ ಕೆಟ್ಟು ಹೋಗುವ ಪರಿಸ್ಥಿತಿ ಇದೆ. ಶ್ರೀಮಠದಲ್ಲಿ ನಿತ್ಯ ಪ್ರವಚನ ನಡೆಯುತ್ತಿದೆ. ಜನರಲ್ಲಿ ಭಕ್ತಿ ಭಾವ ಸಮೂಹವಾಗಿ ವ್ಯಕ್ತ ಆಗುತ್ತಿದೆ. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಾಗ ನಮ್ಮ ಸಂಸ್ಕೃತಿ ಆಗುತ್ತದೆ ಎಂದರು.ಶೇಗುಣಿಸಿಯ ಡಾ. ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಹುಕ್ಕೇರಿಮಠದ ಜಾತ್ರಾ ಮಹೋತ್ಸವ ನಿಮಿತ್ತ ಡಿ. 9ರಿಂದ 30ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಳು ಈಗಾಗಲೇ ಅನೇಕ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿ `ದುಶ್ಚಟಗಳ ಭಿಕ್ಷೆ ಸುದ್ಗುಣಗಳ ದೀಕ್ಷೆ ಎಂದು ಸಂದೇಶ ಸಾರಿದ್ದಾರೆ. ಡಿ. 21ರಂದು ಜಿಲ್ಲಾ ಕ್ರೀಡಾಂಗಣದಿಂದ 6 ಸಾವಿರ ಮಹಿಳೆಯರು ಕೇಸರಿ, ಬಿಳಿ, ಹಸಿರು ಸೀರೆ ಉಟ್ಟು ಬುತ್ತಿ ಹೊತ್ತು ಶ್ರೀಮಠಕ್ಕೆ ಆಗಮಿಸುವ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಡಿ. 27ರಂದು ಮುನ್ಸಿಪಲ್ ಮೈದಾನದಲ್ಲಿ 50ಸಾವಿರ ಜನರನ್ನು ಸೇರಿಸಿ ವಚನ ಗುರುವಂದನ ಕಾರ್ಯಕ್ರಮ ನಡೆಸಲಾಗುವುದು, ಅಲ್ಲದೇ ರಕ್ತದಾನ, ನೇತ್ರದಾನ, ಆರೋಗ್ಯ ಮೇಳಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಆಯೋಜಿಸಲಾಗುವುದು ಎಂದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಡಿ. 25ರಂದು ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ, ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ಹಾಗೂ ಮಹಿಳಾ ಗೋಷ್ಠಿ, ಡಿ. 26ರಂದು ಬೆಳಗ್ಗೆ 10.30ಕ್ಕೆ ಶ್ರೀ ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವದ ನಿಮಿತ್ತ ಕೃಷಿಮೇಳ ಹಾಗೂ ಜಾನುವಾರು ಜಾತ್ರೆ, ಅಂದು ಸಂಜೆ 6.30ಕ್ಕೆ ಪ್ರಸಾದ ನಿಲಯದ ವಜ್ರ ಮಹೋತ್ಸವ, ರಜತ ಮಹೋತ್ಸವ ನಡೆಯಲಿದೆ. ಡಿ. 27ರಿಂದ 29ರ ವರೆಗೆ ಶ್ರೀಮಠದಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ ಎಂದರು. ಡಿ. 27ರಂದು ಮಧ್ಯಾಹ್ನ 4ಗಂಟೆಗೆ ಯುವ ಸಮಾವೇಶ, 51 ಸಾವಿರ ಶರಣ ಸದ್ಭಕ್ತರಿಂದ ವಚನವಂದನ ಗುರುವಂದನ ಸಮಾರಂಭ, ಡಿ. 28ಕ್ಕೆ ಹುಕ್ಕೇರಿಮಠ ಶಿವಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನಾ ಸಮಾರಂಭ, ಸಂಜೆ 6.30ಕ್ಕೆ ಉಭಯ ಶಾಲೆಗಳ ಶಾಲೆಗಳ ಸುವರ್ಣ ಮಹೋತ್ಸವ ಸಮಾರಂಭ, ಡಿ. 29ರಂದು ರಜತ ತುಲಾಭಾರ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಡಿ. 30ರಂದು ಶ್ರೀಮಠದ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಲಿದೆ ಎಂದರು. ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿದರು. ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಮಣಕವಾಡದ ಅಭಿನವ ಮೃತುಂಜಯ್ಯ ಸ್ವಾಮೀಜಿ, ಪಿ.ಡಿ. ಶಿರೂರ, ರಾಜಶೇಖರ ಮಾಗನೂರು, ಮಹೇಶ ಚಿನ್ನಿಕಟ್ಟಿ ಇತರರು ಇದ್ದರು.