ಮುನಿರಾಬಾದ್:
ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಸ್ವಚ್ಛತೆ ಹಾಗೂ ಭಕ್ತರ ಅನುಕೂಲಕ್ಕೆ ಆದ್ಯತೆ ನೀಡಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ಹುಲಿಗೆಮ್ಮ ದೇವಿ ದೇವಸ್ಥಾನವು ರಾಜ್ಯದ ಟಾಪ್ 5 ದೇವಸ್ಥಾನಗಳ ಪೈಕಿ ಒಂದಾಗಿದೆ. ಮೇ 20ರಿಂದ ಮೇ 23ರ ವರೆಗೆ ನಡೆಯುವ ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 10 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ, ಹುಲಿಗೆಮ್ಮ ದೇವಸ್ಥಾನ ಪ್ರಾಧಿಕಾರ ಭಕ್ತರಿಗೆ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ವಿವಿಧ ಕ್ರಮಕೈಗೊಂಡಿದೆ ಎಂದರು.ಹೊಸಪೇಟೆ, ಕೊಪ್ಪಳ ಹಾಗೂ ಗಂಗಾವತಿ ಸೇರಿದಂತೆ ವಿವಿಧೆಡೆಯಿಂದ ಜಾತ್ರೆಗೆ ಆಮಿಸುವ ವಾಹನಗಳಿಗೆ 6 ಕಡೆ (ಹಿಟ್ನಾಳ ರಸ್ತೆಯಲ್ಲಿ 3 ಹಾಗೂ ಹೊಸಪೇಟೆ ರಸ್ತೆಯಲ್ಲಿ 3 ಕಡೆ) ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಹೈಟೆಕ್ ಸ್ಪರ್ಶ ನೀಡಲಾಗಿದೆ. ಅಲ್ಲಿ ಎಲ್‌ಇಡಿ ಪರದೆ ಹಾಗೂ ಕ್ಯುಆರ್ ಪ್ಯಾನಲ್ ಅಳವಡಿಸಲಾಗುವುದು. ಈ ಮೂಲಕ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕವನ್ನು ಇಲ್ಲಿಯಿಂದಲೇ ಭಕ್ತರು ವೀಕ್ಷಿಸಬಹುದು. ಜತೆಗೆ ಡಿಜಿಟಲ್ ಟಚ್ ನೀಡಿದ್ದು ಕ್ಯೂಆರ್ ಕೋಡ್ ಮೂಲಕ ಜಾತ್ರೆಯ ಸಮಗ್ರ ಮಾಹಿತಿ ಪಡೆದುಕೊಳ್ಳಲು ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದ ಅವರು, ಪಾರ್ಕಿಂಗ್ ಪ್ರದೇಶ ಸೇರಿದಂತೆ 10 ಕಡೆ ಶುದ್ಧ ಕುಡಿಯುವ ಹಾಗೂ ಮಾಮೂಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.
ಮಹಾ ದಾಸೋಹ:ಜಾತ್ರೆಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಭಕ್ತರಿಗೆ ದೇವಸ್ಥಾನದ 800 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಮ್ಮನವರ ಮಹಾ ದಾಸೋಹ ಹಮ್ಮಿಕೊಳ್ಳಲಾಗಿದೆ. ಮೇ 13 ರಿಂದ ಜೂ. 12ರ ವರೆಗೆ ಭಕ್ತರ ಅನುಕೂಲಕ್ಕಾಗಿ ಮಹಾ ದಾಸೋಹ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ದೇವಸ್ಥಾನದ ಮುಂಭಾಗದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಫೆಂಡಾಲ್ ಹಾಕಲಾಗುವುದು ಎಂದ ಸಂಸದರು, ದಾಸೋಹ ಕಾರ್ಯಕ್ರಮವು ಸೂಸೂತ್ರವಾಗಿ ನೆರವೇರಿಸಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಇದಲ್ಲದೇ ಸ್ವಚ್ಛತೆ ಹಾಗೂ ಕುಡಿಯುವ ನೀರಿಗಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ ಎಂದರು.
ಭಕ್ತರ ಎಣಿಕೆಗೆ ತಂತ್ರಜ್ಞಾನ:ದೇವಸ್ಥಾನಕ್ಕೆ ನಿತ್ಯ ಆಗಮಿಸುವ ಭಕ್ತರ ಎಣಿಕೆಗೆ ನೂತನ ತಂತ್ರಜ್ಞಾನ ಬಳಸಲಾಗುತ್ತಿದ್ದು, ಈ ಮೂಲಕ ನಿತ್ಯ ಎಷ್ಟು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ ಎಂದು ಮಾಹಿತಿ ದೊರೆಯಲಿದೆ ಎಂದ ಅವರು, ಜಾತ್ರೆಯನ್ನು ಯಶಸ್ವಿಯಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹುಲಿಗಿ ಗ್ರಾಮಸ್ಥರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ರಾಜಶೇಖರ ಹಿಟ್ನಾಳ ಹೇಳಿದರು.
ಈ ವೇಳೆ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ರಾವ್, ಗ್ರಾಮಸ್ಥರಾದ ಈರಣ್ಣ, ಅನಿಲ್ ಕುಮಾರ, ಜಗನ್ನಾಥ, ವಿಜಯಕುಮಾರ ಹಾಗೂ ಇತರರು ಉಪಸ್ಥಿತರಿದ್ದರು.