ಹುಲಿಗೆಮ್ಮ ದೇವಸ್ಥಾನ ಮಾಸ್ಟರ್ ಪ್ಲಾನ್ ಅಡಿ ಅಭಿವೃದ್ಧಿ

KannadaprabhaNewsNetwork |  
Published : Jun 04, 2025, 01:25 AM IST
3ಕೆಪಿಎಲ್21  ಶ್ರೀ ಹುಲಿಗೆಮ್ಮಾ ದೇವಸ್ಥಾನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ | Kannada Prabha

ಸಾರಾಂಶ

ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿಗೆ ಈಗ ಸಿದ್ಧವಾಗಿರುವ ಮಾಸ್ಟರ್ ಪ್ಲಾನ್ ಅಡಿ ಅಭಿವೃದ್ಧಿ ಮಾಡಲು ಬರೋಬ್ಬರಿ ₹ 300 ಕೋಟಿ ಅಗತ್ಯವಿದೆ. ಇದು ಸದ್ಯದ ಅಂದಾಜು ಪ್ರಕಾರ. ಆದರೆ, ವಾಸ್ತವದಲ್ಲಿ ವರ್ಷಗಳು ಕಳೆದಂತೆ ಅಂದಾಜು ಮೊತ್ತ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಲಕ್ಷ ಲಕ್ಷ ಭಕ್ತರು ಆರಾಧ್ಯ ದೈವವಾಗಿರುವ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿಗೆ ಕೊನೆಗೂ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಮಾಸ್ಟರ್ ಪ್ಲಾನ್ ಅಡಿಯಲ್ಲಿಯೇ ಅಭಿವೃದ್ಧಿಗೆ ಮುಂದಾಗಿದೆ. ಹತ್ತಾರು ವರ್ಷಗಳ ಒತ್ತಾಯದ ಮೇರೆಗೆ ಸರ್ಕಾರ ದೇವಸ್ಥಾನವನ್ನು ಮಾಸ್ಟರ್ ಪ್ಲಾನ್ ಅಡಿ ದೇವಸ್ಥಾನದ ಹಣವನ್ನಾದರೂ ಬಳಸಿಕೊಂಡು ಅಭಿವೃದ್ಧಿ ಮಾಡಲು ಮುಂದಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಈ ವರೆಗೂ ನಯಾಪೈಸೆ ನೀಡಿಲ್ಲ. ಆದರೆ, ಬ್ಯಾಂಕಿನಲ್ಲಿಯೇ ಇದ್ದ ಭಕ್ತರ ಕಾಣಿಕೆ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿಲ್ಲ. ಈಗ ಭಕ್ತರ ಒತ್ತಾಯಕ್ಕೆ ಮಣಿದು ಸಮ್ಮತಿ ನೀಡಲಾಗಿದೆ.

₹ 300 ಕೋಟಿ ಪ್ಲಾನ್:

ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಸ್ಥಾನವನ್ನು ಈಗ ಸಿದ್ಧವಾಗಿರುವ ಮಾಸ್ಟರ್ ಪ್ಲಾನ್ ಅಡಿ ಅಭಿವೃದ್ಧಿ ಮಾಡಲು ಬರೋಬ್ಬರಿ ₹ 300 ಕೋಟಿ ಅಗತ್ಯವಿದೆ. ಇದು ಸದ್ಯದ ಅಂದಾಜು ಪ್ರಕಾರ. ಆದರೆ, ವಾಸ್ತವದಲ್ಲಿ ವರ್ಷಗಳು ಕಳೆದಂತೆ ಅಂದಾಜು ಮೊತ್ತ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

₹ 75 ಕೋಟಿ:

ಸದ್ಯದ ಪ್ರಾಥಮಿಕ ಹಂತವಾಗಿ ₹ 75 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಅನುಮತಿ ನೀಡಲಾಗಿದೆ. ಸದ್ಯ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ₹74 ಕೋಟಿ ಇದೆ. ಶೌಚಾಲಯ, ಸ್ನಾನಗೃಹ, ಒಳಚಂರಡಿ, ಗರ್ಭಗುಡಿ ಹಾಗೂ ಸುತ್ತಮುತ್ತಲು ಭೂಸ್ವಾಧೀನ ಮಾಡಿಕೊಳ್ಳಲು ಈಗ ಅನುಮೋದನೆ ನೀಡಲಾಗಿದ್ದು, ಅಂದಾಜು ₹ 75 ಕೋಟಿ ನಿಗದಿ ಮಾಡಲಾಗಿದೆ. ಇದೆಲ್ಲವೂ ಸಹ ದೇವಸ್ಥಾನದಲ್ಲಿಯೇ ಇರುವ ಹಣವಾಗಿದ್ದು, ಸರ್ಕಾರ ವಿಶೇಷ ಅನುದಾನವನ್ನೇನು ಬಿಡುಗಡೆ ಮಾಡಿಲ್ಲ.

ಗರ್ಭಗುಡಿ ಪುನರ್ ನಿರ್ಮಾಣ:

ದೇವಸ್ಥಾನ ಗರ್ಭಗುಡಿಯನ್ನು ಪುನರ್ ನಿರ್ಮಿಸುವ ಕಾರ್ಯವನ್ನು ಮೊದಲು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ವಿವಿಧ ಮಾದರಿ ಸಿದ್ಧಪಡಿಸಲಾಗಿದೆ. ದೇವಸ್ಥಾನದ ಗರ್ಭಗುಡಿಯನ್ನು ಪುನರ್ ನಿರ್ಮಿಸುವ ವೇಳೆ ಈಗಿರುವ ದೇವಸ್ಥಾನ ಮೂರ್ತಿ ಸೇರಿದಂತೆ ಯಾವುದಕ್ಕೂ ಧಕ್ಕೆಯಾಗದಂತೆ ಮತ್ತು ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಮುತುವರ್ಜಿ ವಹಿಸಲಾಗಿದೆ. ನಿರ್ಮಾಣ ಹಂತದಲ್ಲಿಯೂ ಭಕ್ತರಿಗೆ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡುವ ದಿಸೆಯಲ್ಲಿಯೂ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಪ್ರತಿನಿತ್ಯವೂ ಹತ್ತಾರು ಸಾವಿರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಹುಣ್ಣಿಮೆಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಲಕ್ಷಕ್ಕೂ ಅಧಿಕ ಇರುತ್ತದೆ. ಹೀಗಾಗಿ, ಬರುವ ಭಕ್ತರು ನಿರಾತಂಕವಾಗಿ ದೇವರ ದರ್ಶನ ಮಾಡುವ ರೀತಿಯಲ್ಲಿಯೇ ಗರ್ಭಗುಡಿಯ ಅಭಿವೃದ್ಧಿ ಮಾಡಬೇಕು ಎನ್ನುತ್ತಾರೆ ಭಕ್ತರು.

ಬಹವರ್ಷಗಳ ಬೇಡಿಕೆ:

ಹುಲಿಗೆಮ್ಮ ದೇವಸ್ಥಾನಕ್ಕೆ ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಭಕ್ತರು ಆಗಮಿಸುವ ದೇವಸ್ಥಾನಗಳಲ್ಲೊಂದಾಗಿದೆ. ಹೀಗಾಗಿ, ದೇವಸ್ಥಾನಕ್ಕೆ ಪ್ರತಿ ವರ್ಷವೂ ₹5ರಿಂದ ₹ 6 ಕೋಟಿ ಕಾಣಿಕೆಯಿಂದಲೇ ಬರುತ್ತದೆ. ಹೀಗಾಗಿ, ಲಕ್ಷ ಲಕ್ಷ ಭಕ್ತರು ಆಗಮಿಸಿದರೂ ಮೂಲಭೂತ ಸೌಕರ್ಯದ ಕೊರತೆ ಇದೆ. ಹೀಗಾಗಿ, ದೇವಸ್ಥಾನವನ್ನು ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಿದರೂ ಈ ವರೆಗೂ ಸ್ಪಂದನೆ ದೊರೆತಿಲ್ಲ. ಆದರೆ, ಈಗ ಸರ್ಕಾರ ಕೊನೆಗೂ ಅಸ್ತು ಎಂದಿದೆ. ದೇವಸ್ಥಾನದಲ್ಲಿಯೇ ಇರುವ ಕಾಣಿಕೆಯ ಹಣದಲ್ಲಿಯೇ ಅಭಿವೃದ್ಧಿ ಕೈಕೈಗೊಳ್ಳಲು ಸರ್ಕಾರ ಮುಂದಾಗಿದೆ.ಹುಲಿಗೆಮ್ಮ ದೇವಸ್ಥಾನಕ್ಕೆ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿಗೆ ₹ 300 ಕೋಟಿ ಅಗತ್ಯವಿದೆ. ಹಂತ-ಹಂತವಾಗಿ ಮಾಡಲು ಈಗ ಅನುಮತಿ ನೀಡಲಾಗಿದೆ.

ರಾಜಶೇಖರ ಹಿಟ್ನಾಳ ಸಂಸದಹುಲಿಗೆಮ್ಮ ದೇವಸ್ಥಾನವನ್ನು ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿಪಡಿಸಲು ಪ್ರಥಮವಾಗಿ ಶೌಚಾಲಯ, ಸ್ನಾನಗೃಹ, ಭೂಸ್ವಾಧೀನ ಹಾಗೂ ಗರ್ಭಗುಡಿ ಪುನರ್‌ ನಿರ್ಮಾಣಕ್ಕೆ ಅನುಮತಿ ದೊರೆತಿದೆ.

ಎಂ.ಎಚ್. ಪ್ರಕಾಸ ಇಒ ಹುಲಿಗೆಮ್ಮ ದೇವಸ್ಥಾನ ಹುಲಿಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ