ಶಿಗ್ಗಾಂವಿ: ಒಳ್ಳೆಯ ಕೆಲಸಗಳು ನಮ್ಮನ್ನು ಪುಣ್ಯದ ಕಡೆಗೆ ಕೊಂಡೊಯುತ್ತವೆ. ಹಾಗೆಯೇ ನಾವು ಮಾಡುವ ಕೆಲಸಗಳು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ತಿಳಿಸಿದರು.ತಾಲೂಕಿನ ಹುಲಸೋಗಿ ಗ್ರಾಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಹುಲಸೋಗಿ ಗ್ರಾಮದ ದೊಡ್ಡಾಟ ಕಲಾ ಬಳಗದ ವತಿಯಿಂದ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಹಾಗೂ ದೊಡ್ಡಾಟ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೂ ಹಾಗೂ ಹುಲಸೋಗಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ದೊಡ್ಡಾಟ ಕಲೆ ಉಳಿಯಲು ಹುಲಸೋಗಿ ಗ್ರಾಮದ ಕಲಾವಿದರ ಶ್ರಮ ಬಹಳ ಇದೆ. ಹಾಗಾಗಿ ಹುಲಸೋಗಿ ಗ್ರಾಮವನ್ನು ದೊಡ್ಡಾಟದ ತೊಟ್ಟಿಲು ಎಂದರೆ ತಪ್ಪಾಗಲಾರದು. ಆ ತೊಟ್ಟಿಲು ನಿರಂತರವಾಗಿ ತೂಗುತ್ತಿರಬೇಕು. ಅಂದರೆ ದೊಡ್ಡಾಟ ಕಲೆಯನ್ನು ಜೀವಂತವಾಗಿಡಬೇಕು. ಅದಕ್ಕೆ ವಿಶ್ವವಿದ್ಯಾಲಯದ ಸಹಕಾರ ಸದಾ ಇರುತ್ತದೆ ಎಂದರು.ಹಿರಿಯ ಸಾಹಿತಿ ಡಾ. ಬಾಳಸಾಹೇಬ್ ಲೋಕಾಪುರ ಅವರು ಪುಸ್ತಕದ ಬಗ್ಗೆ ಮಾತನಾಡಿ, ವೀರ ವೀರಾಗಿ ಬಾಹುಬಲಿ ದೊಡ್ಡಾಟದ ಪುಸ್ತಕವು ಭರತ ಬಾಹುಬಲಿಯ ಚರಿತ್ರೆಯನ್ನು ತಿಳಿಸುವುದರ ಜತೆಗೆ ನಮ್ಮ ನೆಲಮೂಲ ಸಂಸ್ಕೃತಿಯ ಸೊಗಡನ್ನು ಬಿತ್ತರಿಸುತ್ತದೆ ಎಂದರು.ಪುಸ್ತಕ ವಿಮರ್ಶಕ ಡಾ. ಜಿನದತ್ತ ಹಡಗಲಿ ಮಾತನಾಡಿ, ಎಲ್ಲವುದಕ್ಕೂ ಮೂಲ ಜಾನಪದ, ರಂಗಭೂಮಿ. ಅದರಲ್ಲಿಯೂ ವಿಶೇಷವಾಗಿ ಬಯಲಾಟ ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಎಂ.ಎಸ್. ಮಾಳವಾಡ ಅವರ ಕೃತಿಗಳು ಕಲಾಕ್ಷೇತ್ರಕ್ಕೆ ಒಳ್ಳೆಯ ಕೊಡುಗೆಯಾಗಲಿವೆ ಎಂದರು.ಈ ವೇಳೆ ಜಾನಪದ ಕಲಾವಿದರಾದ ಶಂಭಯ್ಯ ಹಿರೇಮಠ ಉಪನ್ಯಾಸ ನೀಡಿದರು. ಎಂ.ಎಸ್. ಮಾಳವಾಡ ಸಾವಿತ್ರಮ್ಮ ತಿಪ್ಪಣ್ಣ ಸೊಲಬಕ್ಕನವರ ಫಕ್ಕೀರೇಶ ಬಿಸಟ್ಟಿ ಹಾಗೂ ಹಿರಿಯ ದೊಡ್ಡಾಟದ ಕಲಾವಿದರನ್ನು ಸನ್ಮಾನಿಸಲಾಯಿತು.
ರಾಣಿಬೆನ್ನೂರು: ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ನಮ್ಮ ಸಂಸ್ಕೃತಿಯ ಆಚಾರ, ವಿಚಾರಗಳ ಅರಿವು ಮೂಡಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮತ್ತೀಹಳ್ಳಿ ತಿಳಿಸಿದರು.ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಅಧ್ಯಯನ ಕೈಗೊಂಡಲ್ಲಿ ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಶಾಲೆಗೆ ದಾನ ನೀಡಿದ ಶಂಕ್ರಗೌಡ ಕುಸಗೂರ, ಶಂಕ್ರಗೌಡ ತರಗನಹಳ್ಳಿ, ಗೀತಾ ಕೆಳಗಿನಮನಿ ಹಾಗೂ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಇದ್ದರು.