ಮಲೆಮಹದೇಶ್ವರನಿಗೆ ಚಿನ್ನದ ಕೀರಿಟ ಧಾರಣೆ

KannadaprabhaNewsNetwork | Published : Feb 28, 2025 12:46 AM

ಸಾರಾಂಶ

ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವ ಅಂಗವಾಗಿ ಮಲೆಮಹದೇಶ್ವರನಿಗೆ ಚಿನ್ನದ ಕಿರೀಟಧಾರಣೆ ವಿಶೇಷ ಪೂಜೆ ಜಾಗರಣೆ ಹಾಗೂ ಉತ್ಸವ ಸಂಭ್ರಮ ಸಡಗರದೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರುಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವ ಅಂಗವಾಗಿ ಮಲೆಮಹದೇಶ್ವರನಿಗೆ ಚಿನ್ನದ ಕಿರೀಟಧಾರಣೆ ವಿಶೇಷ ಪೂಜೆ ಜಾಗರಣೆ ಹಾಗೂ ಉತ್ಸವ ಸಂಭ್ರಮ ಸಡಗರದೊಂದಿಗೆ ಜರುಗಿತು.

ಹನೂರು ಕ್ಷೇತ್ರ ವ್ಯಾಪ್ತಿಯ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಉತ್ಸವಾದಿಗಳು ನಡೆಯಿತು. ಸಂಜೆ ಸಾಲೂರು ಬೃಹನ್ಮಠ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಂಪ್ರದಾಯದಂತೆ ಮಹದೇಶ್ವರನಿಗೆ ಹಬ್ಬದ ಅಂಗವಾಗಿ ಬಂಗಾರದ ಕಿರೀಟ ಧರಿಸಿ ಸ್ವಾಮಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿಯೊಂದಿಗೆ ಮುಂಜಾನೆವರೆಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಬಂಗಾರ ಕಿರೀಟ ಧರಿಸಿದ್ದ ಸ್ವಾಮಿಯನ್ನು ನೋಡಿ ಕಣ್ತುಂಬಿಕೊಂಡರು.

ಹರಕೆ ಹೊತ್ತ ಭಕ್ತರಿಂದ ವಿಶೇಷ ಉತ್ಸವಗಳು:

ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ, ತಮಿಳುನಾಡಿನಿಂದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಹರಕೆ ಹೊತ್ತ ಭಕ್ತಾದಿಗಳಿಂದ ಚಿನ್ನದ ತೇರು ಉತ್ಸವ ಹಾಗೂ ಬೆಳ್ಳಿ ತೇರು ಉತ್ಸವ ಸೇರಿದಂತೆ ರುದ್ರಾಕ್ಷಿ ಮಂಟಪೋತ್ಸವ, ಮಲೆಮಹದೇಶ್ವರ ಉತ್ಸವ ಹಾಗೂ ದೂಪದ ಸೇವೆ, ಮುಡಿ ಸೇವೆ ಮತ್ತು ಪಂಜಿನ ಸೇವೆ ಹಲವು ಉತ್ಸವ ಸೇವೆಗಳನ್ನು ಸಲ್ಲಿಸುವ ಮೂಲಕ ಭಕ್ತಾದಿಗಳು ಮಹದೇಶ್ವರನಿಗೆ ಹರಕೆ ತೀರಿಸಿ ಜೈಕಾರಗಳೊಂದಿಗೆ ಉಘೆ ಉಘೇ ಎಂದು ಸಂಭ್ರಮ ಮುಗಿಲು ಮುಟ್ಟಿತು.

ನಿರಂತರ ವಿಶೇಷ ದಾಸೋಹ:

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗಾಗಿ ನಿರಂತರ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತಾದಿಗಳಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು

ಜಾಗರಣೆ;

ಮಹಾಶಿವರಾತ್ರಿ ಎಂದು ಬುಧವಾರ ರಾತ್ರಿ ಮಹದೇಶ್ವರ ಬೆಟ್ಟದ ದೇವಾಲಯದ ಮುಂಭಾಗದಲ್ಲಿರುವ ಡಾರ್ಮೆಂಟರಿಯಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಶಿವ ಜಾಗರಣೆ ಮಾಡುವ ಮೂಲಕ ವೇದಿಕೆಯಲ್ಲಿ ಭಕ್ತಿಗೀತೆಗಳು ಹಾಗೂ ಕಥಾಪ್ರಸಂಗ ವಿಶೇಷ ಉತ್ಸವ ಪೂಜಾ ಕಾರ್ಯಕ್ರಮಗಳು ಬೆಳಗಿನ ಜಾವದವರೆಗೆ ಜಾಗರಣೆ ಉತ್ಸವ ನಡೆಯಿತು. ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಮೂರನೇ ದಿನ ಗುರುವಾರ ಸಹ ಮಾದೇಶ್ವರನಿಗೆ ಬೆಳಗಿನ ಜಾವ ವಿಶೇಷ ಪೂಜೆ ಉತ್ಸವಾದಿಗಳು ಸಂಭ್ರಮ ಸಡಗರದೊಂದಿಗೆ ಬೇಡಗಂಪಣ ಸರದಿ ಅರ್ಚಕರಿಂದ ಪೂಜಾ ಕಾರ್ಯಕ್ರಮಗಳು ಜರುಗಿತು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಕವಿತಾ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ.ಇ.ರಘು, ಡಿವೈಎಸ್ಪಿ ಧರ್ಮೇಂದರ್ ಹಾಗೂ ಬೇಡಗಂಪಣ ಸಮುದಾಯದ ಹಿರಿಯ ಅರ್ಚಕ ಕೆ.ವಿ.ಮಾದೇಶ್ ಮತ್ತು ಮುಖಂಡರಾದ ಮುರುಗ ಹಾಗೂ ದೇವಾಲಯದ ಪಾರು ಪತ್ತೆಗಾರರಾದ ಮಹಾಲಿಂಗನ ಕಟ್ಟೆ ಮಹದೇವಸ್ವಾಮಿ ದೇವಾಲಯದ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 3 ದಿನಗಳಿಂದ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲೂ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ದಾಸೋಹ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆಗೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಹಕಾರ ನೀಡಬೇಕು.ಎ.ಇ.ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆಮಹದೇಶ್ವರ ಬೆಟ್ಟ

Share this article