ಮಾ.2ರಿಂದ ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ: ಈಶ್ವರ ಖಂಡ್ರೆ

KannadaprabhaNewsNetwork | Published : Feb 28, 2025 12:46 AM

ಸಾರಾಂಶ

ಪ್ರಥಮ ಬಾರಿಗೆ ಸರ್ಕಾರದ ಆಶ್ರಯದಡಿ ನಗರದಲ್ಲಿ ಬೃಹತ್‌ ಪ್ರಮಾಣದಲ್ಲಿ ಈ ವೈದ್ಯರ ಸಮ್ಮೇಳನ ಹಮ್ಮಿಕೊಳ್ಳ ಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಮಾರ್ಚ್‌ 2, 3 ಹಾಗೂ 4ರಂದು ನಗರದಲ್ಲಿ ಸರ್ಕಾರದ ಆಶ್ರಯದಲ್ಲಿ ಬೃಹತ್‌ ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನವು ಜರುಗಲಿದ್ದು, ರಾಜ್ಯದ ವಿವಿಧೆಡೆಯಿಂದ ಸುಮಾರು 2 ಸಾವಿರ ವೈದ್ಯರು ಭಾಗವಹಿಸಲಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಅವರು ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪ್ರಥಮ ಬಾರಿಗೆ ಸರ್ಕಾರದ ಆಶ್ರಯದಡಿ ನಗರದಲ್ಲಿ ಬೃಹತ್‌ ಪ್ರಮಾಣದಲ್ಲಿ ಈ ವೈದ್ಯರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಮಠಗಳ ಆಶ್ರಯದಲ್ಲಿ ನಡೆಸಲಾಗುತ್ತಿತ್ತು, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವೈದ್ಯ ಪರಿಷತ್ತಿನ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಈ 15ನೇ ವೈದ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.ಶತಮಾನಗಳಿಂದ ಪಾರಂಪರಿಕವಾಗಿ ಹರಿದು ಬಂದ ಈ ವೈದ್ಯಕೀಯ ಜ್ಞಾನವನ್ನು ಉಳಿಸಿ ಬೆಳೆಸಬೇಕಾಗಿದೆ. ಆಯಾ ಪ್ರದೇಶಕ್ಕಾನುಗುಣವಾಗಿ ಸಸ್ಯ ಪ್ರಭೇದಗಳಿವೆ. ರಾಜ್ಯದ ಜೀವ ವೈವಿಧ್ಯತೆ ಶ್ರೀಮಂತ ವಾಗಿವೆ. ಇದನ್ನು ಸಂರಕ್ಷಿಸಬೇಕಾದದ್ದು, ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪಾರಂಪರಿಕ ವೈದ್ಯ ಪದ್ಧತಿಯಿಂದ ಅನೇಕ ರೋಗಗಳನ್ನು ವಾಸಿ ಮಾಡಲಾಗುತ್ತದೆ. ಕಾಲಗರ್ಭದಲ್ಲಿ ವಂಶಪರಂಪರೆಯಾಗಿ ಹರಿದು ಬರುತ್ತಿರುವ ಪಾರಂಪರಿಕ ವೈದ್ಯಕೀಯ ಜ್ಞಾನವು ಅಲ್ಲಲ್ಲಿ ಬತ್ತಿ ಹೋಗದಂತೆ ಕ್ರಮ ವಹಿಸಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.ಪ್ರತಿಯೊಂದು ಸಸ್ಯವು ಒಂದಿಲ್ಲೊಂದು ಔಷಧಿಯ ಗುಣವನ್ನು ಹೊಂದಿರುತ್ತದೆ. ರೋಗವಿಲ್ಲದ ಮನುಷ್ಯನಿಲ್ಲ ಔಷಧಿ ಗುಣವಿಲ್ಲದ ಸಸ್ಯವಿಲ್ಲ ಎಂಬ ಗಾದೆ ಮಾತು ಪ್ರಸ್ತುತವೆನಿಸುತ್ತದೆ. ಆದ್ದರಿಂದ ಪಾರಂಪರಿಕ ವೈದ್ಯಶಾಸ್ತ್ರವನ್ನು ರಕ್ಷಣೆ ಮಾಡುವುದು ಮಹತ್ವದ್ದಾಗಿದೆ. ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ತಜ್ಞರು, ಸಂಶೋಧಕರಿಂದ ಒಟ್ಟು 11 ಗೋಷ್ಠಿಗಳು ಜರುಗಲಿವೆ. ಸಮ್ಮೇಳನದ ಯಶಸ್ವಿ ಗಾಗಿ ಒಟ್ಟು 17 ಸಮಿತಿಗಳನ್ನು ರಚಿಸಲಾಗಿದೆ. ಉತ್ತಮ ಆಹಾರ ಹಾಗೂ ವಸತಿಯ ವ್ಯವಸ್ಥೆ ಮಾಡಲಾಗಿದೆ.

ಮಾ.1ರಂದು ಬೆಳಿಗ್ಗೆ 9 ಗಂಟೆಗೆ ಎಸ್‌ಕೆ ಜಾಬಶೆಟ್ಟಿ ಆರ್ಯುವೇದಿಕ ಕಾನೂನು ಸಿದ್ಧಾರೂಢ ಮಠದಿಂದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದವರೆಗೆ ಬೃಹತ್‌ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪೌರಾಡಳಿತ ಸಚಿವ ರಹೀಮ್‌ ಖಾನ್‌, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್‌, ಪ್ರೊ.ಜಗನ್ನಾಥ ಹೆಬ್ಬಾಳೆ, ಪಾರಂಪರಿಕ ವೈದ್ಯ ಪರಿಷತ್‌ ಅಧ್ಯಕ್ಷ ಜಿ.ಮಹಾದೇವಯ್ಯ ಹಾಗೂ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.ಮೇ ತಿಂಗಳಲ್ಲಿ ಜಿಲ್ಲಾ ಸಂಕೀರ್ಣಕ್ಕೆ ಶಂಕುಸ್ಥಾಪನೆ; ಸಿಎಂಗೆ ಆಹ್ವಾನಬೀದರ್‌: ಜಿಲ್ಲಾ ಸಂಕೀರ್ಣಕ್ಕೆ ಅಗತ್ಯವಿರುವ ಸರ್ಕಾರದ ಮಂಜೂರಾತಿಗಳು ದೊರಕಿದ್ದು ಕೆಲವು ದಿನಗಳಲ್ಲಿ ಟೆಂಡರ್‌ ಕರೆದು ಬರುವ ಮೇ ತಿಂಗಳ ಒಳಗಾಗಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಡಿಗಲ್ಲು ಹಾಕಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈ ಹಿಂದಿನ ಸರ್ಕಾರದಲ್ಲಿ ಯಾವುದೇ ಹಣ ಬಿಡುಗಡೆಯಾಗಿದ್ದಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಇದೀಗ ಟೆಂಡರ್‌ ಹಂತಕ್ಕೆ ಬಂದಿದ್ದು ಒಂದೂವರೆ ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿದು 49ಕೋಟಿ ರು.ಗಳ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಾಗವುದು ಎಂದರು.ಸಿಎಂಗೆ ಮನವಿ: ಜಿಲ್ಲೆಯ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಗೊಂಡ ನಂತರ ಅಲ್ಲಿಯೇ ರಾಜ್ಯದ ಸಚಿವ ಸಂಪುಟ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಸುತ್ತೇನೆ ಎಂದು ತಿಳಿಸಿದರು.ಈ ಹಿಂದೆಯೇ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ಮತ್ತು ಇನ್ನಿತರ ಸನ್ನಿವೇಶಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರಿಗೆ ಮನವಿ ಸಲ್ಲಿಸಿದ್ದೆ, 650 ಕೋಟಿ ರು.ಗಳ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಪ್ರಗತಿಯಲ್ಲಿದೆ. ಕಾಮಗಾರಿಗಾಗಿ ಮಾರ್ಚ್‌ಗೂ ಮುನ್ನ ಇನ್ನೊಂದು ಕಂತಿನ ರೂಪದಲ್ಲಿ 20 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.5 ಸಾವಿರ ಮೆಗಾ ವ್ಯಾಟ್‌ ಸೋಲಾರ್‌ ಪಾರ್ಕ್ :ಬೀದರ್‌ ಜಿಲ್ಲೆಯಲ್ಲಿ 30 ಸಾವಿರ ಕೋಟಿ ರು.ಗಳ ಯೋಜನಾ ವೆಚ್ಚದಲ್ಲಿ 5,000 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಉಪ್ಪಾದನಾ ಘಟಕ (ಸೋಲಾರ್‌ ಪಾರ್ಕ್‌) ನಿರ್ಮಿಸಲಾಗುವುದು ಈಗಾಗಲೇ ಔರಾದ್‌ನಲ್ಲಿ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಬೀದರ್‌ನಿಂದ ನಾಗರಿಕ ವಿಮಾನಯಾನ ಆರಂಭಕ್ಕೆ ಈಗಾಗಲೇ 15 ಕೋಟಿ ರು.ಗಳನ್ನು ಸರ್ಕಾರ ಮೀಸಲಿಟ್ಟು ಆದೇಶಿಸಿದೆ, ಆದರೆ ವಿಮಾನದ ಕಂಪನಿ ಕೆಎಸ್‌ಐಐಡಿಸಿ ಜೊತೆ ಒಪ್ಪಂದ ಮಾಡಿಕೊಳ್ಳುವು ದು ಬಾಕಿಯಿದೆ. ಅಷ್ಟಕ್ಕೂ ವಿಮಾನ ಕಂಪನಿಗಳು ಲಾಭವನ್ನೇ ನೆಚ್ಚಿಕೊಂಡಿರುವದು ವಿಳಂಬಕ್ಕೆ ಕಾರಣವಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.

ಹುಮನಾಬಾದ್‌ಗೆ ಅನ್ಯಾಯ ಮಾಡಿಲ್ಲ: ರಹೀಮ್‌ ಖಾನ್‌ಬೀದರ್‌: ಹುಮನಾಬಾದ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪುರಸಭೆಗಳಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಿಲ್ಲ, ಎಷ್ಟು ಬೇಕೋ ಅಷ್ಟೂ ಅನುದಾನ ನೀಡಲು ಸಿದ್ಧ ಎಂದು ಪೌರಾಡಳಿತ ಸಚಿವ ರಹೀಮ್‌ ಖಾನ್‌ ಸ್ಪಷ್ಟಪಡಿಸಿದರು.ಇತ್ತೀಚೆಗೆ ಹುಮನಾಬಾದ್‌ ಪುರಸಭೆ ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಸೇರಿದಂತೆ ಮತ್ತಿತರ ಕಾಂಗ್ರೆಸ್‌ನ ಮುಖಂಡರು ರಹೀಮ್‌ ಖಾನ್‌ ವಿರುದ್ಧ ಹುಮನಾಬಾದ್‌ ಕ್ಷೇತ್ರದ ಪುರಸಭೆಗಳ ಅನುದಾನ ಕಡಿತದ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ಅಂಥದ್ಯಾವುದೇ ಕ್ರಮವಾಗಿಲ್ಲ. ಆಯಾ ಪುರಸಭೆಗಳಿಗೆ ಅಗತ್ಯವಿದ್ದಷ್ಟೂ ಅನುದಾನ ನೀಡಲು ಸಿದ್ಧರಿದ್ದೇವೆ ಎಂದರಲ್ಲದೆ ಇನ್ನು, ಅಲ್ಲಿನ ಕಾಂಗ್ರೆಸ್‌ ನಾಯಕರ ಮುನಿಸನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದೂ ರಹೀಮ್‌ ಖಾನ್‌ ಸ್ಪಷ್ಟಪಡಿಸಿದರು.

Share this article