ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ನಂತರ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿಜ್ಞಾನದಲ್ಲಿ ತಂತ್ರಜ್ಞಾನ ಇಲ್ಲವೆಂದರೂ ಮನುಷ್ಯ ಬದುಕಬಹುದು. ಆದರೆ, ಕೃಷಿ ಇಲ್ಲವೆಂದರೆ ಯಾರೊಬ್ಬರೂ ಬದುಕಲು ಸಾಧ್ಯವಿಲ್ಲ ಎಂದರು.
ರೈತರು ಮತ್ತು ವ್ಯವಸಾಯ ದೇಶದ ಮುಂದಿನ ಭವಿಷ್ಯವಾಗುತ್ತದೆ. ರೈತರು ಕೃಷಿಯನ್ನು ಪ್ರೋತ್ಸಾಹಿಸಿ ಅವಲಂಬಿಸಿಕೊಂಡು ಬದುಕಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಕೃಷಿ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದರು.ಇಂದಿನ ಉನ್ನತ ವ್ಯಾಸಂಗಗಳು ಮುಂದಿನ ಐದತ್ತು ವರ್ಷಗಳಲ್ಲಿ ಯಾವುದೇ ಉದ್ಯೋಗ ಕೊಡುವುದಿಲ್ಲ. ಕೃತಕ ಬುದ್ಧಿಮತೆ(ಎಐ) ಬಂದು ಶೇ.90ರಷ್ಟು ಉದ್ಯೋಗ ಕಸಿದುಕೊಳ್ಳಲಿದೆ. ಕೃಷಿ ಕಾಯಕದಲ್ಲಿ ತೊಡಗಿರುವ ದೇಶದ ಶೇ.60ರಷ್ಟು ಜನರು ತಮಗಿರುವ ಜಮೀನನ್ನು ಉಳಿಸಿಕೊಂಡು ತಾಂತ್ರಿಕತೆಯೊಂದಿಗೆ ಕೃಷಿಯನ್ನೇ ಮುಂದುವರಿಸಿದರೆ ದೇಶದ ಭವಿಷ್ಯ ರೈತರದ್ದಾಗುತ್ತದೆ. ಹಾಗಾಗಿ ನಮ್ಮ ವಿದ್ಯಾಭ್ಯಾಸಕ್ಕಾಗಿ ಇರುವ ಜಮೀನನ್ನು ಮಾರಾಟ ಮಾಡದಂತೆ ವಿದ್ಯಾರ್ಥಿಗಳು ಪೋಷಕರಿಗೆ ಕಟ್ಟುನಿಟ್ಟಾಗಿ ಹೇಳಬೇಕು ಎಂದರು.
ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಉಪಯೋಗಿಸಿ ವ್ಯವಸಾಯ ಮಾಡುವುದರಿಂದ ಮಾಲಿನ್ಯ ಹೆಚ್ಚಾಗಿ ಭೂಮಿಯ ತಾಪಮಾನ, ವಾತಾವರಣ ಬದಲಾಗುತ್ತದೆ. ಈ ಕೃಷಿ ವಸ್ತು ಪ್ರದರ್ಶನದಲ್ಲಿ ವಿಜ್ಞಾನದ ಆವಿಷ್ಕಾರ ತಂತ್ರಜ್ಞಾನಗಳನ್ನು ಉಪಯೋಗಿಸುವ ವಿಜ್ಞಾನಿಗಳು, ತಂತ್ರಜ್ಞರು ಇರುತ್ತಾರೆ. ರೈತರು ಅವರಿಂದ ಮಾಹಿತಿ ಪಡೆದುಕೊಂಡು ತಂತ್ರಜ್ಞಾನದೊಂದಿಗೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಮಾತನಾಡಿ, ಕೃಷಿಯಿಂದ ಕೈಗಾರಿಕೆ ಬೆಳವಣಿಗೆಯಾಗುತ್ತದೆ. 5 ಸಾವಿರ ಟನ್ ಕಬ್ಬು ಅರೆಯುವ ಒಂದು ಸಕ್ಕರೆ ಕಾರ್ಖಾನೆ ಸಾವಿರಾರು ಕುಟುಂಬಗಳಿಗೆ ನೆರವಾಗುತ್ತದೆ. ಮಾಲಿನ್ಯ ಕಡಿಮೆಯಾಗಬೇಕೆಂದರೆ ಕೃಷಿ ಹೆಚ್ಚಾಗಬೇಕು. ಮೌಲ್ಯವರ್ಧನೆಗೆ ಕೃಷಿ ಮತ್ತು ಕೈಗಾರಿಕೆಗಳ ಸಂಯೋಜನೆ ಬಹಳ ಮುಖ್ಯ ಎಂದರು.
ರಾಜ್ಯ ಹೆಚ್ಚುವರಿ ಅಭಿಯೋಜಕ ಜಗದೀಶ್, ಅಮೆರಿಕಾದ ಯುವ ಉದ್ಯಮಿ ಆದಿತ್ಯ ಅನಿಲ್‌ರೆಡ್ಡಿ ಹಾಗೂ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿದರು. ಮಾಯಸಂದ್ರದ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಶಿವಲಿಂಗೇಗೌಡ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.
ಕೃಷಿ ಇಲಾಖೆ ವತಿಯಿಂದ ನಿರ್ಮಿಸಿದ್ದ ಸಮಗ್ರ ಕೃಷಿ ಪದ್ಧತಿ, ಕೃಷಿಭಾಗ್ಯ, ಮಳೆ ನೀರು ಸಂಗ್ರಹಿಸುವ ಚೆಕ್‌ಡ್ಯಾಂ, ಕೃಷಿ ಹೊಂಡ ಸೇರಿದಂತೆ ಜಲಾನಯನ ಚಟುವಟಿಕೆಯ ಮಾದರಿ ಎಲ್ಲರ ಗಮನ ಸೆಳೆಯಿತು.