ಟೌನ್ ಪ್ಲಾನಿಂಗ್ ಅಧಿಕಾರಿ ಸಹಿಯೇ ನಕಲಿ..!

KannadaprabhaNewsNetwork |  
Published : Mar 02, 2026, 01:30 AM IST
೧ಕೆಎಂಎನ್‌ಡಿ-೧ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿ. | Kannada Prabha

ಸಾರಾಂಶ

ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಸಹಿಯನ್ನು ಮಧ್ಯವರ್ತಿಯೊಬ್ಬ ಪೋರ್ಜರಿ ಮಾಡಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತಂತೆ ಮದ್ದೂರು ಕೆ.ಎಚ್.ನಗರ ಬಡಾವಣೆಯ ಎಚ್.ಎಸ್.ಶಿವಲಿಂಗೇಗೌಡ ಅವರು ಮೈಸೂರು ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಸಹಿಯನ್ನು ಮಧ್ಯವರ್ತಿಯೊಬ್ಬ ಪೋರ್ಜರಿ ಮಾಡಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತಂತೆ ಮದ್ದೂರು ಕೆ.ಎಚ್.ನಗರ ಬಡಾವಣೆಯ ಎಚ್.ಎಸ್.ಶಿವಲಿಂಗೇಗೌಡ ಅವರು ಮೈಸೂರು ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ನಿವಾಸಿ ಬಿ.ಶಂಕರ್ ಎಂಬಾತ ಮಂಡ್ಯ ನಗರ ಮತ್ತು ಯೋಜನಾ ಸಹಾಯಕ ನಿರ್ದೇಶಕಿ ಎಚ್.ಕೆ.ರೇಣುಕಾ ಅವರ ಸಹಿಯನ್ನು ಪೋರ್ಜರಿ ಮಾಡಿದ್ದಾರೆಂದು ಆರೋಪಿಸಲಾಗಿದೆ. ದೂರು ನೀಡಿ ಒಂದು ತಿಂಗಳಾದರೂ ಮಂಡ್ಯದ ಯೋಜನಾ ಸಹಾಯಕ ನಿರ್ದೇಶಕಿ ಎಚ್.ಕೆ.ರೇಣುಕಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಧ್ಯವರ್ತಿ ಬಿ.ಶಂಕರ್ ಜೊತೆಗೆ ಯೋಜನಾ ಸಹಾಯಕ ನಿರ್ದೇಶಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಹರ್ಷ ಹಾಗೂ ಟೈಪಿಸ್ಟ್ ಶೋಭಾ ಸಹಕಾರ ನೀಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಪ್ರಕರಣವೇನು?;

ಮದ್ದೂರು ತಾಲೂಕು ಹೆಮ್ಮನಹಳ್ಳಿ ಗ್ರಾಮದ ಸರ್ವೇ ನಂ. ೫೪೬/ಆರ್‌ಎಸ್‌ರಲ್ಲಿ ೩೯ಗುಂಟೆ, ಸರ್ವೆ ನಂ.೫೫೨/ಆರ್‌ಎಸ್‌ರಲ್ಲಿ ೩೯ ಗುಂಟೆ, ಬೋರಾಪುಟ ಗ್ರಾಮದ ಸರ್ವೇ ನಂ.೨೮/೧ರಲ್ಲಿ ೩೫ ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಲು ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಕಚೇರಿಯಲ್ಲಿ ಹೊರಗುತ್ತಿಗೆ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಶೋಭಾ ಎಂಬಾಕೆ ಸಹಾಯಕ ನಿರ್ದೇಶಕರು ಸೂಚನೆ ನೀಡದಿದ್ದರೂ ಮೂರು ಭೂ ಪರಿವರ್ತನೆಗಳಿಗೆ ತಾಂತ್ರಿಕ ಅಭಿಪ್ರಾಯವನ್ನು ಟೈಪ್ ಮಾಡಿ ನೀಡಿದ್ದಾರೆ. ನಂತರ ಬಿ.ಶಂಕರ್ ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕಿ ಎಚ್.ಕೆ.ರೇಣುಕಾ ಅವರ ಸಹಿಯನ್ನು ಪೋರ್ಜರಿ ಮಾಡಿದ್ದಾರೆ. ಬಳಿಕ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಹರ್ಷನಿಗೆ ಕಡತವನ್ನು ನೀಡಿ ಅವರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿರುವುದಾಗಿ ದೂರಲಾಗಿದೆ.

ಈ ವಿಚಾರವಾಗಿ ಎಚ್.ಎಸ್.ಶಿವಲಿಂಗೇಗೌಡರು ೨೮ ಜನವರಿ ೨೦೨೬ ರಂದೇ ಮೈಸೂರು ನಗರ ಮತ್ತು ಗ್ರಾಮಾಂತರ ಯೋಜನಾ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕಿ ಎಂ.ಎಸ್.ಪಂಕಜಾ ಅವರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲು ಸೂಚಿಸಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕಿ ಎಚ್.ಕೆ.ರೇಣುಕಾ ಮೌನ ವಹಿಸಿದ್ದಾರೆ. ಈ ಪ್ರಕರಣದ ವಿಷಯ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವನ್ನೂ ತಲುಪಿದ್ದು, ಅವರೂ ಈ ಕುರಿತು ವಿವರವಾದ ವರದಿ ನೀಡುವಂತೆ ಮೈಸೂರಿನ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಪ್ರತಿಕ್ರಿಯೆಗೆ ನಿರಾಕರಣೆ

ಮಧ್ಯವರ್ತಿಯೊಬ್ಬ ಪೋರ್ಜರಿ ಸಹಿ ಮಾಡಿರುವ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡುವುದಕ್ಕೆ ಮಂಡ್ಯದ ಯೋಜನಾ ಸಹಾಯಕ ನಿರ್ದೇಶಕಿ ಎಚ್.ಕೆ.ರೇಣುಕಾ ನಿರಾಕರಿಸಿದ್ದಾರೆ. ಇಲ್ಲದ ಸಬೂಬು ಹೇಳಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಶಂಕೆಗೆ ಎಡೆಮಾಡಿಕೊಟ್ಟಿದೆ. ಟೌನ್ ಪ್ಲಾನಿಂಗ್ ಕಚೇರಿ ಎಂಬ ನರಕ

ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿ ಎನ್ನುವುದು ಸಾಮಾನ್ಯ ಜನರ ಪಾಲಿಗೆ ಅಕ್ಷರಶಃ ನರಕ ದರ್ಶನ ಮಾಡಿಸುತ್ತಿದೆ. ಕನಿಷ್ಠ ಒಂದು ವರ್ಷ ಒಂದೂವರೆ ವರ್ಷದ ಹಿಂದೆ ವಿನ್ಯಾಸನಕ್ಷೆ ಅನುಮೊದನೆಗೆ ಅರ್ಜಿ ಸಲ್ಲಿಸಿದವರ ಕಡತಗಳು ಇನ್ನೂ ಅಲ್ಲೇ ಉಳಿದಿವೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಕಚೇರಿಗೆ ಅಲೆಯುವುದು ಮಾತ್ರ ಜನರಿಗೆ ತಪ್ಪಿಲ್ಲ. ನೋಟು ತಳ್ಳಿದರಷ್ಟೇ ಕಡತಗಳು ಮುಂದಕ್ಕೆ ಸಾಗುವುದು ಎಂಬ ಮಾತು ಜನರ ಬಾಯಲ್ಲಿ ಜನಜನಿತವಾಗಿದೆ.

ಇಡೀ ಜಿಲ್ಲೆಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಒಬ್ಬ ಎಂಜಿನಿಯರ್ ಮಾತ್ರ ನಿಭಾಯಿಸುತ್ತಿದ್ದಾರೆ. ಕಚೇರಿಯಲ್ಲಿರುವ ೧೩ ಹುದ್ದೆಗಳ ಪೈಕಿ ಸಹಾಯಕ ನಿರ್ದೇಶಕರು ಸೇರಿ ಇಬ್ಬರೇ ಇರೋದು. ಯೋಜನಾ ಸಹಾಯಕ ನಿರ್ದೇಶಕರ ಜವಾಬ್ದಾರಿಯೂ ಹೆಚ್ಚುವರಿಯಾಗಿದೆ. ವಾರದಲ್ಲಿ ಎರಡು ದಿನವೋ ಮೂರು ದಿನವೋ ಬರುತ್ತಾರೆ. ಅರ್ಜಿ ಸಲ್ಲಿಸಿದವರ ಸ್ಥಳ ವೀಕ್ಷಣೆಗೆ ಕೆಲವರನ್ನು ನೇಮಿಸಿಕೊಂಡಿದ್ದಾರೆ. ಒಮ್ಮೊಮ್ಮೆ ಅವರೂ ಹೋಗುವುದೂ ಉಂಟು. ಮಧ್ಯವರ್ತಿಗಳೂ ಇಲ್ಲಿರುವುದರಿಂದ ಎಲ್ಲರ ನೆರವಿನೊಂದಿಗೆ ಎಲ್ಲವನ್ನೂ ಅರ್ಥೈಸಿಕೊಂಡಿರುವವರ ಕಡತಗಳು ಕಚೇರಿಯಲ್ಲಿ ಸಲೀಸಾಗಿ ಮುಂದೆ ಸಾಗಿದರೆ, ಇನ್ನುಳಿದವರ ಕಡತಗಳು ಧೂಳು ಹಿಡಿಯುತ್ತಿರುವುದು ವಿಪರ್ಯಾಸದ ಸಂಗತಿ.

ಹಿಂದಿನ ಯೋಜನಾ ಸಹಾಯಕ ನಿರ್ದೇಶಕಿಯಾಗಿದ್ದ ಅನನ್ಯಾ ಮನೋಹರ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ನಂತರವಾದರೂ ಕಚೇರಿ ಕೆಲಸಗಳು ಸುಧಾರಣೆಯಾಗಬಹುದೆಂದು ನಂಬಲಾಗಿತ್ತು. ಆದರೆ, ಅಂತಹ ಯಾವುದೇ ಬೆಳವಣಿಗೆಗಳು ಕಾಣಿಸುತ್ತಿಲ್ಲ. ಇನ್ನೂ ಕಚೇರಿಯಲ್ಲಿ ಸಾರ್ವಜನಿಕರ ವೇದನೆ ಮುಂದುವರಿದೇ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೀರಶೈವ ಧರ್ಮ ವಿಶಾಲವಾದುದು: ಶಾಸಕ ಷಡಕ್ಷರಿ
ಕಲಾ ಚಟುವಟಿಕೆಗಳಿಗೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ