ಮಾನವ ಹಕ್ಕು ಉಲ್ಲಂಘನೆಯಾಗದಿರಲಿ: ನ್ಯಾ.ನಾರಾಯಣಸ್ವಾಮಿ

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ಮಾನವ ಹಕ್ಕುಗಳ ಉಲ್ಲಂಘನೆ ಆಗುವ ಮುಂಚಿತವಾಗಿ ಮುಂಜಾಗ್ರತೆ ವಹಿಸಿಕೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.

ಯಾದಗಿರಿ: ಮಾನವ ಹಕ್ಕುಗಳ ಉಲ್ಲಂಘನೆ ಆಗುವ ಮುಂಚಿತವಾಗಿ ಮುಂಜಾಗ್ರತೆ ವಹಿಸಿಕೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾನವ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು, ಮಾನವ ಹಕ್ಕುಗಳ ಉಲ್ಲಂಘನೆಗಿಂತ ಮುಂಚಿತವಾಗಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕವಾಗಿದೆ. ಮಾನವೀಯ ಹಾಗೂ ಕಳಾಕಳಿಯ ನೆಲೆಯ ಮೇಲೆ ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿಭಾಯಿಸಿ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅವರು ಸಲಹೆ ನೀಡಿದರು.

ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಮೂಲಭೂತ ಹಕ್ಕು ಆಗಿದೆ. ಈ ದಿಶೆಯಲ್ಲಿ ಅಧಿಕಾರಿಗಳು ಸರ್ಕಾರ ಕೊಡ ಮಾಡುವ ಸೌಲತ್ತುಗಳ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನಾಗರಿಕರ ರಕ್ಷಣೆ ಘನತೆ ಗೌರವ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.

ಯಾದಗಿರಿಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಪೀಠದ ಎದುರು ಯಾದಗಿರಿ ಜಿಲ್ಲೆಯಿಂದ ಒಟ್ಟು 36 ಪ್ರಕರಣಗಳು ಬಂದಿದ್ದು 25 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಾಕಿ ಉಳಿದ 11 ಪ್ರಕರಣಗಳನ್ನು ಅರ್ಧದಲ್ಲಿ ಪ್ರೊಸಿಡಿಂಗ್ಸ್ ಹಂತದಲ್ಲಿವೆ. ಅದರಂತೆ ಈ ಪ್ರಕರಣಗಳ ಪೈಕಿ 13 ಪ್ರಕರಣಗಳಿಗೆ ಸ್ಥಳದಲ್ಲಿಯೇ ಇತ್ಯರ್ಥ ಗೊಳಿಸಿ ತೀರ್ಮಾನಿಸಲಾಗಿದೆ. ಎಲ್ಲ ಅಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.

ಅದರಂತೆ, ಹೊಸದಾಗಿ 14 ದೂರುಗಳು ಸ್ವೀಕಾರ ಮಾಡಲಾಗಿದೆ. ಆರು ಪ್ರಕರಣಗಳಿಗೆ ಸ್ಥಳದಲ್ಲಿ ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ಇನ್ನೊಂದು ಪ್ರಕರಣ ಇತ್ಯರ್ಥವಾಗಲಿದೆ. ಇನ್ನುಳಿದ ಮೂರು ಹೊಸ ಪ್ರಕರಣ ಹೊಸದಾಗಿ ನೋಂದಣಿಯಾಗಿದ್ದು ಐದು ಪ್ರಕರಣಗಳು ನೊಂದಣಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅಡುಗೆ ಸಿಬ್ಬಂದಿಗೆ 6 ತಿಂಗಳ ವೇತನ ನಿಲ್ಲಿಸಿದ್ದು, ಶೀಘ್ರದಲ್ಲೇ ಅವರಿಗೆ ವೇತನ ಪಾವತಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಗಡುವು ನೀಡಿದರು.

ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ, ಡಾ.ಟಿ.ಶ್ಯಾಮ್ ಭಟ್, ಹಿರಿಯ ಸಿವಿಲ್ ನ್ಯಾಯಧೀಶರಾದ ರವೀಂದ್ರ ಹೋನಲೆ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್. ಪಿ. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಆಯೋಗದ ಆಪ್ತ ಕಾರ್ಯದರ್ಶಿ ಅರುಣ ಪೂಜಾರಿ, ಕಾರ್ಯದರ್ಶಿ ದಿನೇಶ್ ಸಂಪತಕುಮಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share this article