ಪ್ರಪಂಚದಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ: ಶ್ರೀರಾಮ್

KannadaprabhaNewsNetwork |  
Published : Dec 11, 2025, 04:30 AM IST
CPDRS Protest 1 | Kannada Prabha

ಸಾರಾಂಶ

ವಿಶ್ವ ಆರ್ಥಿಕತೆಯ ಬಿಕ್ಕಟ್ಟಿನಿಂದಾಗಿ, ಪ್ರಪಂಚದಾದ್ಯಂತ ಮಾನವ ಹಕ್ಕುಗಳನ್ನು ಯಾವುದೇ ತಡೆ ಇಲ್ಲದೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಸಿಪಿಡಿಆರ್‌ಎಸ್ ರಾಜ್ಯ ಸಂಚಾಲಕ ಎಂ.ಎನ್.ಶ್ರೀರಾಮ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವ ಆರ್ಥಿಕತೆಯ ಬಿಕ್ಕಟ್ಟಿನಿಂದಾಗಿ, ಪ್ರಪಂಚದಾದ್ಯಂತ ಮಾನವ ಹಕ್ಕುಗಳನ್ನು ಯಾವುದೇ ತಡೆ ಇಲ್ಲದೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಸಿಪಿಡಿಆರ್‌ಎಸ್ ರಾಜ್ಯ ಸಂಚಾಲಕ ಎಂ.ಎನ್.ಶ್ರೀರಾಮ್ ಹೇಳಿದ್ದಾರೆ.

ಸೆಂಟರ್‌ ಫಾರ್‌ ಪ್ರೊಟೆಕ್ಷನ್‌ ಆಫ್‌ ಡೆಮೊಕ್ರಟಿಕ್‌ ರೈಟ್ಸ್‌ ಆ್ಯಂಡ್‌ ಸೆಕ್ಯುಲರಿಸಂನ (ಸಿಪಿಡಿಆರ್‌ಎಸ್) ಕರ್ನಾಟಕ ಘಟಕವು ಬುಧವಾರ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಜಾ ಮೇಲಿನ ಯುದ್ಧವು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಸಾಮ್ರಾಜ್ಯಶಾಹಿ ಪ್ರಪಂಚದ ಆಷಾಢಭೂತಿತನವನ್ನು ಬಹಿರಂಗಪಡಿಸಿದೆ. ನಮ್ಮ ದೇಶವೂ ಸಹ ಈ ಪ್ರವೃತ್ತಿಗೆ ಹೊರತಾಗಿಲ್ಲ. ಜನರ ಹಕ್ಕುಗಳನ್ನು ನಿಗ್ರಹಿಸಲು ಯುಎಪಿಎ, ಎನ್‌ಎಸ್‌ಎ ಮತ್ತು ಎಎಫ್‌ಎಸ್‌ಪಿಎಯಂತಹ ಕಾನೂನುಗಳನ್ನು ವಿವೇಚನಾರಹಿತವಾಗಿ ಬಳಸುವುದು ಈ ಪ್ರವೃತ್ತಿಗೆ ಒಂದು ಉದಾಹರಣೆಯಾಗಿದೆ. ಇದನ್ನು ರದ್ದು ಮಾಡಬೇಕು. ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಸ್ವಾತಂತ್ರ್ಯದ ಹಕ್ಕು ಮತ್ತು ತ್ವರಿತ ವಿಚಾರಣೆಯನ್ನು ಖಾತ್ರಿಪಡಿಸಲು ಬಿಎಸ್‌ಎಸ್‌, ಬಿಎನ್‌ಎಸ್ಎಸ್ ಮತ್ತು ಬಿಎಸ್‌ಎ ಗಳನ್ನು ಪರಿಶೀಲಿಸಿ ಮತ್ತು ತಿದ್ದುಪಡಿ ಮಾಡಿ ಎಂದು ಆಗ್ರಹಿಸಿದರು.

ಹಿರಿಯ ವಕೀಲ ಸುರೇಂದ್ರ ಬಾಬು ಅವರು ಮಾತನಾಡಿ, ಪ್ರಪಂಚದಾದ್ಯಂತ ಐತಿಹಾಸಿಕವಾಗಿ ನಿರಂಕುಶ ಆಡಳಿತಗಾರರು ತಮ್ಮ ನಾಗರಿಕರ ಮಾನವ ಹಕ್ಕುಗಳನ್ನು ಸಾಂಪ್ರದಾಯಿಕವಾಗಿ ಕಸಿದುಕೊಂಡಿದ್ದಾರೆ. ಅಂತಹ ದೇಶಗಳಲ್ಲಿ ಮಾನವ ಹಕ್ಕುಗಳನ್ನು ಪುನಃಸ್ಥಾಪಿಸಿದ್ದು ನಾಗರಿಕರ ಹೋರಾಟವೇ ಎಂದು ನುಡಿದರು.

ರಾಜ್ಯ ಸಂಘಟಕ ಎನ್. ರವಿ ಮಾತನಾಡಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಹೋರಾಡಿದರು ಮತ್ತು ನಾವು ಈಗ ಆ ಹೋರಾಟವನ್ನು ಮುಂದುವರಿಸಬೇಕಾದ ಹಂತದಲ್ಲಿದ್ದೇವೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವು ಶ್ರೀಮಂತರಿಂದ, ಶ್ರೀಮಂತರಿಗಾಗಿ ಮತ್ತು ಶ್ರೀಮಂತರ ಆಳ್ವಿಕೆಯಾಗಿದೆ. ಅದೇ ಸಮಯದಲ್ಲಿ ಸಾಮಾನ್ಯ ಜನರು ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ ಎಂದರು.

ಸುಮಾರು 12 ಕಾಲೇಜುಗಳ ಕಾನೂನು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಧ್ಯಾರ್ಥಿಗಳು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ಅಂಬೇಡ್ಕರ್‌ ಭವನ ಅವ್ಯವಸ್ಥೆ ಆಗರ !
ಕಬ್ಬಿಗೆ ಒಟ್ಟು ₹ 5500 ನೀಡಲು ರೈತರ ಬೇಡಿಕೆ