ಕನ್ನಡಪ್ರಭ ವಾರ್ತೆ ಕೆಜಿಎಫ್
ಮಾನವ ಕಳ್ಳ ಸಾಗಾಣಿಕೆಗೆ ದುರ್ಬಲ ವರ್ಗಗಳು ಗುರಿಯಾಗುತ್ತಿದ್ದು, ಇದನ್ನು ತಡೆಯುವುದು ಪೊಲೀಸರ ಕರ್ತವ್ಯ ಎಂದು ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ತಿಳಿಸಿದರು.ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಕೆಜಿಎಫ್ ವಕೀಲರ ಸಂಘ, ಪೊಲೀಸ್ ಇಲಾಖೆ, ಬೆಮಲ್‌ನ ಸಂಯುಕ್ತ ಪದವಿಪೂರ್ವ ಕಾಲೇಜಿನ ಜಂಟಿ ಸಂಯುಕ್ತಾಶ್ರಯದಲ್ಲಿ ಬೆಮೆಲ್‌ನ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಕಳ್ಳಸಾಗಾಣಿಕೆ ವಿಷಯವು ಗಂಭೀರವಾದ ಸಂಕೀರ್ಣ, ಜಾಗತಿಕ ಸಮಸ್ಯೆಯಾಗಿ ಬೆಳೆದಿದೆ, ಬದಲಾದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಇದು ತನ್ನ ವ್ಯಾಪ್ತಿಯನ್ನು ವ್ಯಾಪಕವಾಗಿ ವಿಸ್ತರಿಸಿದೆ. ಇದನ್ನು ತಡೆಯಲು ಹಲವು ಕಾನೂನುಗಳಿದ್ದು, ಪೊಲೀಸ್ ವ್ಯವಸ್ಥೆ, ಸರ್ಕಾರದ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಪರಿಣಾಮಕಾರಿಯಾಗಿ ಶ್ರಮಿಸುತ್ತಿದ್ದರೂ, ಹೊಸ ಮಾರ್ಗಗಳು ಹಾಗೂ ತಂತ್ರಜ್ಞಾನದ ಮೂಲಕ ಕಳ್ಳಸಾಗಾಣಿಕೆ ಚಟುವಟಿಕೆಯಲ್ಲಿ ಪಾತಕಿಗಳು ತೊಡಗುತ್ತಿದ್ದು, ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ ಎಂದರು.
ಮಾನವ ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಕೂಡಲೇ ೧೧೨ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.೨ನೇ ಅಪರ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯು ಒಂದು ವ್ಯವಸ್ಥಿತ ಅಪರಾಧವಾಗಿದ್ದು, ಜಾಗತಿಕ ಮಟ್ಟದಲ್ಲಿ ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಮತ್ತು ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ ಬಳಿಕ ಮಾನವ ಕಳ್ಳಸಾಗಾಣಿಕೆ ೩ನೇ ಅತೀ ದೊಡ್ಡ ಕಾನೂನು ಬಾಹಿರ ಚಟುವಟಿಕೆಯಾಗಿದೆ, ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುತ್ತಿದ್ದರೂ ಹಲವಾರು ದುರ್ಬಲ ಮಹಿಳೆಯರು ಮತ್ತು ಮಕ್ಕಳು ಕಳ್ಳಸಾಗಾಣಿಕೆಯ ಜಾಲದಲ್ಲಿ ಸಿಲುಕಿ ಅಮಾನವೀಯ, ಕರುಣಾಜನಕ ಪರಿಸ್ಥಿತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಾನವ ಕಳ್ಳ ಸಾಗಾಣಿಕೆಯಂಥ ಹೀನ ಕೃತ್ಯದಿಂದ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಹದಿಹರಿಯದ ವಿದ್ಯಾರ್ಥಿಗಳು ಯಾವುದೇ ಆಮಿಷಗಳಿಗೆ ಒಳಗಾಬಾರದೆಂದು ನ್ಯಾಯಾಧೀಶರು ತಿಳಿಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ರಾಜಗೋಪಾಲಗೌಡ ಮಾತನಾಡಿ, ಮಾನವ ಕಳ್ಳಸಾಗಣಿಕೆ ಎಂಬುದು ಸಮಾಜದ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ, ಮಹಿಳೆಯರು, ಅಪ್ರಾಪ್ತ ಹೆಣ್ಣು ಮಕ್ಕಳು, ಮಕ್ಕಳು ಆರ್ಥಿಕವಾಗಿ ದುಬರ್ಲವಾಗಿರುವವರು ಈ ಅನಿಷ್ಠ ಕೂಪಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದು, ಇಂತಹ ಮುಗ್ದ ಜೀವಿಗಳ ರಕ್ಷಣೆಗಾಗಿ ಹಾಗೂ ಮಾನವ ಕಳ್ಳಸಾಗಣಿಕೆ ಎಂಬ ಪಿಡುಗನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿವರ್ಷವೂ ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಬೆಮೆಲ್ ಸಂಕೀರ್ಣದ ಮುಖ್ಯಸ್ಥರಾದ ಯೋಗಾನಂದ.ಜಿ ಮಾತನಾಡಿ, ಮಾನವ ಕಳ್ಳಸಾಗಣಿಕೆಯು ಅಪರಾಧ ಕೃತ್ಯವಾಗಿದ್ದು, ಇದೊಂದು ಗುಲಾಮಗಿರಿಯ ರೂಪವಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಅನಿಷ್ಠ ಕೂಪಕ್ಕೆ ಸಿಲುಕಿ ಬಲಿಯಾಗುತ್ತಿದ್ದಾರೆ, ಮಹಿಳೆಯರು, ಮಕ್ಕಳು, ಅಪ್ರಾಪ್ತ ಹೆಣ್ಣು ಮಕ್ಕಳು, ಅಮಾಯಕ ಜನ ಮಾನವ ಈ ಸರಪಳಿಯಲ್ಲಿ ಬಂಧಿಯಾಗುತ್ತಿದ್ದಾರೆ, ಇದನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯ, ಕಾಲೇಜಿನ ಶಿಕ್ಷಣ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ವಕೀಲರಾದ ಮಗೇಂದ್ರನ್, ಪರಮೇಶ್, ಸಿಡಿಪಿಒ ರಾಜೇಶ್ ಮಾನವ ಕಳ್ಳ ಸಾಗಣಿಕೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲಹೆ- ಸೂಚನೆಗಳನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಸುಧಾ.ಜಿ. ಅವರು ಕಾರ‍್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆ ನೆರವೇರಿಸಿದರು.