ಮಾನವ ಕಳ್ಳ ಸಾಗಾಣಿಕೆ ಸಾಮಾಜಿಕ ಪಿಡುಗು: ನ್ಯಾ. ಹನುಮಂತಪ್ಪ

KannadaprabhaNewsNetwork |  
Published : Feb 06, 2025, 11:45 PM IST
ಚಿಕ್ಕಮಗಳೂರು ತಾಲೂಕು ಪಂಚಾಯ್ತಿಯ ಡಾ. ಅಂಬೇಡ್ಕರ್‌ ಸಭಾಂಗಣದಲ್ಲಿ ಗುರುವಾರ ನಡೆದ ಮಾನವ ಕಳ್ಳ ಸಾಗಣಿಕೆಯ ಮಜಲುಗಳ ಅರಿವು ಕುರಿತ ಕಾರ್ಯಾಗಾರವನ್ನು ನ್ಯಾ. ಹನುಮಂತಪ್ಪ ಅವರು ಉದ್ಘಾಟಿಸಿದರು. ಎಎಸ್ಪಿ ಕೃಷ್ಣಮೂರ್ತಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಇದಕ್ಕೆ ಸಣ್ಣ ಮಕ್ಕಳು, ಯುವತಿಯರು, ಹೆಣ್ಣು ಮಕ್ಕಳು ಬಲಿಪಶು ಆಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.

ಮಾನವ ಕಳ್ಳ ಸಾಗಾಣಿಕೆಯ ಮಜಲುಗಳ ಅರಿವು ಕುರಿತ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಇದಕ್ಕೆ ಸಣ್ಣ ಮಕ್ಕಳು, ಯುವತಿಯರು, ಹೆಣ್ಣು ಮಕ್ಕಳು ಬಲಿಪಶು ಆಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ತಾಲೂಕು ಪಂಚಾಯ್ತಿಯ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಮಾನವ ಕಳ್ಳ ಸಾಗಣಿಕೆಯ ಮಜಲುಗಳ ಅರಿವು ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿವಿಧ ಆಮಿಷಗಳಿಗೆ ಒಳಗಾಗಿ ಮೋಸದ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾಗಬೇಕು.

ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಮಾನವ ಕಳ್ಳ ಸಾಗಾಣಿಕೆ ತಡೆಯಲು ಸಾಧ್ಯ ವಾಗುತ್ತದೆ. ಅಮಾಯಕ ಹೆಣ್ಣು ಮಕ್ಕಳು ಮಾನವ ಕಳ್ಳ ಸಾಗಾಣಿಕೆದಾರರಿಗೆ ಬಲಿಯಾಗುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದು ಒಂದೆಡೆಯಾದರೆ, ಸಣ್ಣ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಹಚ್ಚುವುದು, ಮಾನವ ದೇಹದ ಅಂಗಾಂಗ ಗಳ ಮಾರಾಟದ ಪ್ರಸಂಗಗಳು ಕೇಳಿ ಬರುತ್ತಿವೆ ಎಂದರು.

ಪ್ರತಿಯೊಬ್ಬ ಪ್ರಜ್ಞಾವಂತ ಸಮುದಾಯ ವಿವಿಧ ಇಲಾಖೆ ಅಧಿಕಾರಿಗಳು, ವಿಶೇಷವಾಗಿ ಪಾಲಕರು ಬಹು ಎಚ್ಚರಿಕೆಯಿಂದ ಇದ್ದು, ಮಾನವ ಕಳ್ಳ ಸಾಗಾಣಿಕೆ ತಡೆಗೆ ಸಂಕಲ್ಪ ತೊಡಬೇಕು. ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಮಾನವ ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಜನತೆ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಯಿಂದ ಸಾಮಾನ್ಯ ಮಹಿಳೆಯರಿಗೆ ಸಮಾಜದಲ್ಲಿ ಜೀವನ ನಡೆಸಲು ಸಮಸ್ಯೆಯಾಗುತ್ತಿದೆ. ಮಹಿಳೆಯರನ್ನು ಕಳ್ಳ ಸಾಗಾಣಿಕೆಯಿಂದ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದು, ಕೆಲವು ಮಾರಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಲೈಂಗಿಕ ಕ್ರಿಯೆಗೆ ದುರ್ಬಳಕೆ, ಅಂಗಾಂಗಗಳ ಮಾರಾಟ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳಿಗೆ ಮಾನವ ಕಳ್ಳಸಾಗಾಣಿಕೆ ನಡೆಯುತ್ತದೆ ಎಂದರು.

ಒಡನಾಡಿ ಸೇವಾ ಸಂಸ್ಥೆ ಕಾರ್ಯದರ್ಶಿ ಕೆ.ವಿ. ಸ್ಟ್ಯಾನ್ಲಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಸಾರ್ವಜನಿಕರು ಜಾಗೃತ ರಾಗಬೇಕು. ಇಂದು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವಾರು ಕಾರ್ಯಕ್ರಮ ಆಯೋಜಿಸುವ ಜೊತೆಗೆ ಕ್ರಿಯಾ ಯೋಜನೆಗಳನ್ನು ರೂಪಿಸಿದ್ದು, ತಂಡಗಳನ್ನು ರಚಿಸಿ ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲು ಪಣತೊಟ್ಟಿದೆ. ಹೆಣ್ಣು ಮಕ್ಕಳನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದನ್ನು ನಾವು ಪತ್ತೆ ಮಾಡಿ ಅವರಿಗೆ ನೆರವು ನೀಡಿ, ಉತ್ತಮ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ ಎಂದು ಹೇಳಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯಲ್ಲಿ ತಂತ್ರಜ್ಞಾನದ ಬಳಕೆ ಉಪಯೋಗ ಮತ್ತು ದುರುಪಯೋಗ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತು ಜನರು ಜವಾಬ್ದಾರಿಯುತವಾಗಿ ತಡೆಗಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇಶಕ ರೇವಣ್ಣ, ಪರಿವರ್ತನಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಡಿ. ಶಂಕರಪ್ಪ, ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಎಂ.ಎಲ್‌. ಪರಶುರಾಮ್ ಉಪಸ್ಥಿತರಿದ್ದರು. 6 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕು ಪಂಚಾಯ್ತಿಯ ಡಾ. ಅಂಬೇಡ್ಕರ್‌ ಸಭಾಂಗಣದಲ್ಲಿ ಗುರುವಾರ ನಡೆದ ಮಾನವ ಕಳ್ಳ ಸಾಗಣಿಕೆ ಮಜಲುಗಳ ಅರಿವು ಕುರಿತ ಕಾರ್ಯಾಗಾರವನ್ನು ನ್ಯಾ. ಹನುಮಂತಪ್ಪ ಉದ್ಘಾಟಿಸಿದರು. ಎಎಸ್ಪಿ ಕೃಷ್ಣಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು