ಕನ್ನಡಪ್ರಭ ವಾರ್ತೆ ಮಂಗಳೂರುಯುದ್ಧ ಗಾಯಾಳುಗಳು ಹಾಗೂ ಯುದ್ಧ ಕೈದಿಗಳನ್ನು ಮಾನವೀಯತೆಯ ತಳಹದಿಯಲ್ಲಿ ಕಾಪಾಡುವುದು ಎಲ್ಲ ರಾಷ್ಟ್ರಗಳ ಕರ್ತವ್ಯ. ಇಂತಹ ಮಹತ್ವದ ಉದ್ದೇಶವನ್ನು 1949ರ ಜಿನಿವಾ ಒಪ್ಪಂದ ಹೊಂದಿದೆ ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕ ವತಿಯಿಂದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿನಿವಾ ಒಪ್ಪಂದ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಜಿನಿವಾ ಒಪ್ಪಂದವು ಯುದ್ಧದ ಸಮಯದಲ್ಲಿ ಮಾನವೀಯತೆಯನ್ನು ಕಾಪಾಡುವಲ್ಲಿ ಇಂದಿಗೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಕೆ. ಮೋಹನ್ ಶೆಟ್ಟಿ, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಗುರುದತ್ ನಾಯಕ್, ಪಿ.ಬಿ. ಹರೀಶ್ ರೈ ಇದ್ದರು.ಮಂಗಳೂರು ವಿ.ವಿ. ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ ಎನ್. ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಜಿಲ್ಲಾ ರೆಡ್‌ಕ್ರಾಸ್ ನಿರ್ದೇಶಕಿ ಡಾ.ಸುಮನಾ ಬೋಳಾರ್ ಕ್ವಿಝ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ರೆಡ್‌ಕ್ರಾಸ್‌ನ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಸ್ವಾಗತಿಸಿದರು. ಬೆಸೆಂಟ್ ಮಹಿಳಾ ಕಾಲೇಜಿನ ಯೂತ್ ರೆಡ್‌ಕ್ರಾಸ್ ಅಧಿಕಾರಿ ದೀಕ್ಷಿತಾ ನಿರೂಪಿಸಿದರು.
ಕ್ವಿಝ್ ವಿಜೇತರು:ಜಿನಿವಾ ಒಪ್ಪಂದ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕ್ವಿಝ್‌ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ತಂಡ ಪ್ರಥಮ, ಯೇನೆಪೊಯ ಫಾರ್ಮಸಿ ಕಾಲೇಜು ತಂಡ ದ್ವಿತೀಯ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಲ್ಮಠ ತಂಡ ಮತ್ತು ಎಸ್.ಡಿ.ಎಂ. ಕಾಲೇಜು ಉಜಿರೆ ತಂಡ ತೃತೀಯ ಸ್ಥಾನ ಪಡೆದವು. ಮಂಗಳೂರು ವಿ.ವಿ., ನಿಟ್ಟೆ ಪರಿಗಣಿತ ವಿ.ವಿ. ಹಾಗೂ ಯೇನೆಪೊಯ ವಿ.ವಿ.ಯ 25ಕ್ಕೂ ಅಧಿಕ ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವವಹಿಸಿದ್ದವು.