ಮಂಗಳೂರು: ರಕ್ತದಾನ, ಆರೋಗ್ಯ ಕಾಳಜಿ, ವಿಪತ್ತು ಪರಿಹಾರ ಸಹಿತ ಹಲವು ಸೇವಾ ಕಾರ್ಯಗಳ ಮೂಲಕ ರೆಡ್‌ಕ್ರಾಸ್ ಸಮಾಜಕ್ಕೆ ನೆರವಾಗುತ್ತಿದೆ. ವಿಶ್ವದಾದ್ಯಂತ ರೆಡ್‌ಕ್ರಾಸ್ ಪಸರಿಸಿದ್ದು, ಮಾನವೀಯ ಸೇವೆಯೇ ಸಂಸ್ಥೆಯ ಗುರಿಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ, ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ದರ್ಶನ್.ಎಚ್.ವಿ. ಹೇಳಿದ್ದಾರೆ.ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭವ್ಯ ಶತಮಾನೋತ್ಸವ ಕಟ್ಟಡದ ನಿರ್ಮಾಣ ಸಹಿತ ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಕಾರ್ಯ ಚಟುವಟಿಕೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ರೆಡ್‌ಕ್ರಾಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಕಟ್ಟಡ ನಿರ್ಮಣಕ್ಕೆ ನೆರವಾದ ದಾನಿಗಳನ್ನು ಮತ್ತು ಆಡಳಿತ ಮಂಡಳಿಯ ಮಾಜಿ ನಿರ್ದೇಶಕರನ್ನು ಗೌರವಿಸಲಾಯಿತು.ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಘಟಕ ಕಾರ್ಯ ನಿರ್ವಹಣೆಗಾಗಿ ಸುಳ್ಯ ಘಟಕದ ಅಧ್ಯಕ್ಷ ಪಿ.ಬಿ. ಸುಧಾಕರ ರೈ (ಪ್ರಥಮ) ಹಾಗೂ ಬೆಳ್ತಂಗಡಿ ಘಟಕದ ಹರಿದಾಸ್ ಎಸ್.ಎಂ. (ದ್ವಿತೀಯ) ಪುರಸ್ಕಾರ ಸ್ವೀಕರಿಸಿದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವರದಿ ವಾಚಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಚಿ ಮೋಹನ್ ಶೆಟ್ಟಿ ಕೆ., ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ.ಬಿ. ಸಚ್ಚಿದಾನಂದ ರೈ, ಗುರುದತ್.ಎಂ. ನಾಯಕ್, ವಿಟ್ಟಲ ಎ., ಡಾ.ಸುಮನಾ ಬಿ. ಇದ್ದರು.