ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಇಲ್ಲಿನ ಶ್ರೀನಿವಾಸ ನಗರದಲ್ಲಿ ಅರಣ್ಯ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಅರಣ್ಯ ಹುತಾತ್ಮ ದಿನಾಚರಣೆಯಲ್ಲಿ ದಿ.ಪಿ.ಶ್ರೀನಿವಾಸ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮಾನವನ ದುರಾಸೆಯಿಂದ ವನ ಮತ್ತು ವನ್ಯಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಸಂಬಂಧ ಅರಣ್ಯ ಸಂಪತ್ತನ್ನು ನಾಶ ಮಾಡುತ್ತಿರುವುದರಿಂದ ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಅವುಗಳ ಆವಾಸ ಸ್ಥಾನವನ್ನು ಮನುಷ್ಯರು ಆಕ್ರಮಿಸುತ್ತಿರುವ ಸಲುವಾಗಿ ದಿಕ್ಕುತೋಚದೆ ನಗರ ಪ್ರದೇಶದತ್ತ ಧಾವಿಸುತ್ತಿವೆ. ಪ್ರಾಣಿ, ಪಕ್ಷಿಗಳು ಸೇರಿದಂತೆ ಇರುವೆಯಿಂದ ಆನೆಯವರೆಗೂ ಎಲ್ಲವೂ ವಾಸಿಸುವ ಸ್ಥಳ ಅರಣ್ಯ ಪ್ರದೇಶಗಳು, ಅವುಗಳು ಉಳಿದರೆ ಮಾತ್ರವೇ ನಾವು ಉಳಿಯಲು ಸಾಧ್ಯ ಎಂದು ಹೇಳಿದರು.ನಮ್ಮ ರಾಜ್ಯದ ಒಬ್ಬ ದಕ್ಷ, ನಿಷ್ಠಾವಂತ ಪ್ರಾಮಾಣಿಕ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಕಾಡುಗಳ್ಳ ವೀರಪ್ಪನ್‌ನ ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾಗಿದ್ದಾರೆ ಇಂತಹವರು ಸಾಕಷ್ಟು ಮಂದಿ ಇದ್ದಾರೆ. ಅರಣ್ಯ ಉಳಿವಿಗಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದವರ ನೆನಪಿಗಾಗಿ ಹುತಾತ್ಮರ ದಿನಾಚರಣೆ ಮಾಡಲಾಗುತ್ತಿದೆ.ಇವರೆಲ್ಲಾ ಇಡೀ ಜೀವ ಸಂಕುಲ ಉಳಿವಿಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದವರು ಎಂದರು.
ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರ್‌ಸಾಗರ್ ಮಾತನಾಡಿ, ರಾಜ್ಯದಲ್ಲಿರುವ 24 ಇಲಾಖೆಗಳಲ್ಲಿ 23 ಇಲಾಖೆಗಳು ಈ ಪೀಳಿಗೆಗೆ ಕೆಲಸ ಮಾಡುತ್ತಿವೆ. ಆದರೆ, ಮುಂದಿನ ಪೀಳಿಗೆಗೆ ಕಾರ್ಯ ನಿರ್ವಹಿಸುತ್ತಿರುವುದು ನಮ್ಮ ಅರಣ್ಯ ಇಲಾಖೆ ಮಾತ್ರ ಎಂಬುದು ಹೆಮ್ಮೆ .ಅರಣ್ಯ ಉಳಿವಿಗಾಗಿ ಹಗಲು ರಾತ್ರಿ ಎನ್ನದೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಬಲಿದಾನವಾದವರ ನೆನಪಿಗಾಗಿ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಹುತಾತ್ಮರ ಸಂಖ್ಯೆ ಮುಂದೆ ಹೆಚ್ಚದಂತಾಗಲಿ ಎಂದು ಹೇಳಿದರು.
ಕರ್ತವ್ಯದಲ್ಲಿ ಮಡಿದ ಹುತಾತ್ಮರ ಸ್ಮರಣಾರ್ಥ ಪುಷ್ಪಗುಚ್ಚ ಸಮರ್ಪಿಸಲಾಯಿತು. ಉಪ ವಲಯಾರಣ್ಯಾಧಿಕಾರಿ ಎಂ.ಪಿ.ಸಂತೋಷ್‌ಕುಮಾರ್ ನೇತೃತ್ವದಲ್ಲಿ ಫರೇಡ್ ನಡೆಸಿ ಪೊಲೀಸ್ ತಂಡದವರಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಡಿಸಿಎಫ್ ರಮೇಶ್ ಬಾಬು ಹುತಾತ್ಮರ ಹೆಸರುಗಳನ್ನು ಸ್ಮರಿಸಿದರು.