ಪರಿಸರ ವಿನಾಶದಿಂದ ಮನುಷ್ಯ ಸಂಕುಲಕ್ಕೆ ಸಂಕಷ್ಟ ತಪ್ಪಿದ್ದಲ್ಲ

KannadaprabhaNewsNetwork |  
Published : Jul 02, 2026, 01:45 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ನಗರದ ದೇವಗಿರಿ ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಉದ್ಯಾನವನ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ದೇವಗಿರಿ ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಉದ್ಯಾನವನ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿದ ಪೌರಾಯುಕ್ತ ಎ.ವಾಸಿಂ ಮಾತನಾಡಿ, ಪರಿಸರ ನಾಶದಿಂದ ಮನುಷ್ಯ ಸಂಕುಲ ಸಂಕಷ್ಟಕ್ಕೆ ಈಡಾಗುತ್ತಾನೆ ಎಂಬ ಸತ್ಯ ಗೊತ್ತಿದ್ದರೂ ಸಹ ಇಂದು ಪರಿಸರ ನಾಶ ನಡೆಯುತ್ತಲೇ ಇದೆ. ಮನೆಗೊಂದು ಮರ ಬೆಳೆಸುವ ದೃಢ ನಿರ್ಧಾರ ಮಾಡಬೇಕಾಗಿದೆ. ಗಿಡ ನೆಡುವುದು ಬೆಳೆಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಬೇಕೆ ಹೊರತು ಅದು ತೋರ್ಪಡಿಕೆಯಾಗಬಾರದು. ಈಗಾಗಲೇ ಭೂಮಿಯ ಮೇಲೆ ಸಾಕಷ್ಟು ಕಾಡು ನಾಶವಾಗಿದ್ದು ಅದರ ಫಲ ಆಗಾಗ ಗೋಚರಿಸುತ್ತಿದೆ. ಕಾಡು ಇಲ್ಲದೇ ನಾಡು ಉಳಿಯುವುದಿಲ್ಲ. ಈಗಾಗಲೇ ಮಿತಿ ಮೀರಿದ ವಾಯುಮಾಲಿನ್ಯದಿಂದಾಗಿ ಮನುಷ್ಯನಿಗೆ ಶುದ್ಧವಾದ ಗಾಳಿ ಸಿಗುವುದು ಅಪರೂಪವಾಗಿದೆ. ಸ್ವಾರ್ಥಕ್ಕಾಗಿ ಗಿಡ ಮರಗಳನ್ನು ಕಡಿಯುವುದನ್ನು ಮನುಷ್ಯ ಮೊದಲು ನಿಲ್ಲಿಸಬೇಕು. ಆದಕಾರಣ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ, ರಸ್ತೆಯ ಬದಿ, ಉದ್ಯಾನವನಗಳಲ್ಲಿ ಗಿಡಗಳನ್ನು ಹಾಕುವ ಮತ್ತು ಅವುಗಳನ್ನು ಪೋಷಿಸುವ ಮೂಲಕ ಪರಿಸರವನ್ನು ರಕ್ಷಣೆ ಮಾಡಬೇಕಿದೆ ಎಂದರು.

ಹಿರಿಯ ಸಾಹಿತಿ ಹಾಗೂ ಅನುವಾದಕ ಪ್ರೊ.ಎಂ.ಜಿ.ರಂಗಸ್ವಾಮಿ ಮಾತನಾಡಿ, ಜಾಗತಿಕ ತಾಪಮಾನದಿಂದಾಗಿ ಈಗಾಗಲೇ ಸಾವಿರಾರು ಜನರ ಸಾವುಗಳ ಸುದ್ದಿ ವರದಿಯಾಗುತ್ತಿವೆ. ಬಿಸಿಲಿನ ಬೇಗೆಗೆ ಜನ ತತ್ತರಿಸಿದ್ದರು ಸಹ ವನ ಸಂಪತ್ತಿನ ರಕ್ಷಣೆಗೆ ಮನುಷ್ಯ ಮುಂದಾಗುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಜಗತ್ತಿನ ರಕ್ಷಣೆ ಕಷ್ಟವಾಗುತ್ತದೆ. ಹಾಗಾಗಿ ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವ ಕಾಯಕಕ್ಕೆ ಎಲ್ಲರೂ ಮುಂದಾಗಬೇಕು ಎಂದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪನಹಳ್ಳಿ ಎಂ.ಎಲ್. ಗಿರಿಧರ್ ಮಾತನಾಡಿ, ಪರಿಸರ ಹೋರಾಟಕ್ಕೆ ದೀರ್ಘಕಾಲದ ಇತಿಹಾಸವಿದೆ. ಭಾರತದಲ್ಲಿ ಪರಿಸರ ಚಳುವಳಿಗಳು ಇಂದಿಗೂ ಜೀವಂತವಾಗಿವೆ. ಸುಂದರ್ ಲಾಲ್ ಬಹುಗುಣ, ನಂಜುಂಡಸ್ವಾಮಿ, ಕೋಟ ಶಿವರಾಮ ಕಾರಂತ್, ವಂದನಾ ಶಿವ, ಚುಕ್ಕಿ ನಂಜುಂಡಸ್ವಾಮಿ,ಸುರೇಶ್ ಹೆಬ್ಳಿಕರ್ ಹಾಗೂ ಇತರರು ಪರಿಸರ ಸಂರಕ್ಷಣೆಗೆ ಸಾಕಷ್ಟು ಹೋರಾಟ ನಡೆಸಿದ್ದರು. ಅಂತಹ ಮಹನೀಯರ ಕುರಿತು ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಮಾಡಬೇಕು. ಆ ಮೂಲಕ ಇಂದಿನ ಪೀಳಿಗೆಗೆ ಅವರ ಸಾಧನೆಯನ್ನು ತಿಳಿಸಬೇಕು ಎಂದರು.

ಈ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಹುಚ್ಚವನಹಳ್ಳಿ ಪ್ರಸನ್ನ,ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಎಂ ಮಸ್ಕಲ್, ಪತ್ರಕರ್ತರಾದ ರಮೇಶ್ ಬಿದರಕೆರೆ, ಆರ್ ಶಿವಶಂಕರ್ ಮಠದ್, ಎಂ ರವೀಂದ್ರನಾಥ್ , ಶಿವಕುಮಾರ್,ಹರ್ತಿಕೋಟೆ ರಾಜಣ್ಣ, ಹನುಮಂತರಾಯ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಶರೀಫ್ , ಎಸ್, ಜಿ ರಂಗಸ್ವಾಮಿ ಸಕ್ಕರ, ಪತ್ರಿಕಾ ವಿತರಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗಣ್ಣ, ಖಜಾಂಚಿ ತಿಪ್ಪೇಸ್ವಾಮಿ,ಕರಿಯಣ್ಣ, ಎಂ ಕಿರಣ್ ಮಿರಜ್ಕರ್, ಆರೋಗ್ಯ ನಿರೀಕ್ಷಕರಾದ ವೀರಕ್ಯಾತ ಲಿಂಗಪ್ಪ, ನಯಾಜ್ ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಾಜು ಜಾಗದಲ್ಲಿ ಮೈನಿಂಗ್‌ ಆರಂಭಿಸಲು ಡೆಡ್‌ಲೈನ್‌?
2ನೇ ದಿನ ಎಸ್‌ಐಆರ್‌ ನಮೂನೆ ವಿತರಣೆ ಚುರುಕು