ವಿದ್ಯಾರ್ಥಿ ಜೀವನದಲ್ಲಿ ಮಾನವೀಯತೆ ಮುಖ್ಯ: ಪುಷ್ಪಗಿರಿಯ ಶ್ರೀ

KannadaprabhaNewsNetwork | Published : Oct 7, 2024 1:36 AM

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ, ಸೌಹಾರ್ದತೆಯಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು. ಬೇಲೂರಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಮಾತನಾಡಿದರು.

ಸೇವಾ ಯೋಜನಾ ಶಿಬಿರ

ಕನ್ನಡಪ್ರಭ ವಾರ್ತೆ ಬೇಲೂರು

ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ, ಸೌಹಾರ್ದತೆಯಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ತಾಲೂಕಿನ ಮಾದೀಹಳ್ಳಿ ಹೋಬಳಿಯ ಗುರುಪರಂಪರೆಯ ಚಿಲ್ಕೂರು ಗ್ರಾಮದಲ್ಲಿ ಬೇಲೂರು ಸರ್ಕಾರಿ‌ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಮಾತನಾಡಿ, ಭಾರತವು ಸರ್ವಧರ್ಮಗಳ ರಾಷ್ಟ್ರವಾಗಿದ್ದು ಸಂಸ್ಕೃತಿ, ಕಲೆ, ಪರಂಪರೆ, ಜಾತಿ, ಧರ್ಮಗಳನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ. ಭೇದವನ್ನು ಮರೆತು ಸಾಮರಸ್ಯದಿಂದ ಇರುವುದನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಲೆ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮನ್ವಯ ಮನೋಭಾವನೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಂತ ಮುಖ್ಯವಾದ ವಿಷಯಗಳಲ್ಲಿ ಒಂದಾಗಿದೆ. ಶಾಲೆಯಲ್ಲಿ ಶಿಸ್ತು ಪಾಲಿಸುವುದು ಮುಖ್ಯ. ಶಿಕ್ಷಣದ ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಸ್ತನ್ನು ಕಲಿಯಬೇಕು. ಏಕೆಂದರೆ ಶಿಸ್ತು ಇಲ್ಲದೆ ವಿದ್ಯಾರ್ಥಿಗಳು ಸುಶಿಕ್ಷಿತರಾಗಲು ಸಾಧ್ಯವಿಲ್ಲ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿವೆ. ಹಲವಾರು ಕವಿಗಳು, ಜನಸಾಮಾನ್ಯರು ಸಾಹಿತ್ಯ ರಚಿಸಿದ್ದರೂ, ಇಡೀ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ ಎಂದರು.

ಕಾಲೇಜು ಪ್ರಾಂಶುಪಾಲರಾದ ಹರೀಶ್, ಗಾಯಕ ಚಂದನ ಕುಮಾರ್‌, ಉಪನ್ಯಾಸಕ ಭಕ್ತರ್ ಸಾಬ್, ಲಕ್ಷ್ಮೀನಾರಾಯಣ, ಚಂದ್ರಕಲಾ ಹಾಗೂ ಗ್ರಾಮಸ್ಥರಾದ ರಾಣಿರವಿ, ಚೇತನ್, ಕಲ್ಲೇಶ್, ಮೊಗಣ್ಣ ಗೌಡ, ಪರಮೇಶ್ವರಪ್ಪ, ಸುನಿತಾ ಪ್ರಭು, ಚಂದ್ರಶೇಖರ, ಸುನೀಲ್ ದೊಡ್ಡಿಹಳ್ಳಿ ಹಾಜರಿದ್ದರು.

Share this article