ಧರ್ಮದ ಚೌಕಟ್ಟಿನಲ್ಲಿ ಮಾನವೀಯತೆ ಪೋಷಣೆ ಅಗತ್ಯ

KannadaprabhaNewsNetwork |  
Published : Aug 12, 2024, 01:09 AM IST
೧೦ ಟಿವಿಕೆ ೪ - ತುರುವೇಕೆರೆರೋಟರಿ ಭವನದಲ್ಲಿರೋಟರಿಕ್ಲಬ್ ಹಾಗೂ ಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿಳಿಗೆರೆ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಬಹುತ್ವವನ್ನು ಮೆರೆದು ಮಾನವೀಯತೆಯನ್ನು ಪೋಷಿಸಬೇಕಿದೆ

ಕನ್ನಡಪ್ರಭವಾರ್ತೆ ತುರುವೇಕೆರೆ

ಎಲ್ಲಾ ಧರ್ಮಗಳ ಎಲ್ಲೆಗಳನ್ನು ಮೀರಿ ಪ್ರಜಾಪ್ರಭುತ್ವವೆಂಬ ಹೊಸ ಧರ್ಮದ ಚೌಕಟ್ಟಿನೊಳಗೆ ಸಹಿಷ್ಣುತೆಯೊಂದಿಗಿನ ಬಹುತ್ವವನ್ನು ಮೆರೆದು ಮಾನವೀಯತೆಯನ್ನು ಪೋಷಿಸಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು

ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮಾನವೀಯ ಅಂತಃಕರಣವನ್ನು ರೂಪಿಸಿಕೊಳ್ಳಲು ಸಂಸ್ಕತಿ ಮತ್ತು ಸಾಹಿತ್ಯಗಳೇ ಮೂಲದ್ರವ್ಯಗಳು. ಇಂದಿನ ಪೀಳಿಗೆಗೆ ಜ್ಞಾನ ಮತ್ತು ಧ್ಯಾನದ ಮಹತ್ವದ ಅರಿವು ಮೂಡಿಸಬೇಕಿದೆ. ಜ್ಞಾನ ಸಂಪಾದನೆಗೆ ನಿರಂತರ ಓದು ಮತ್ತು ಅಧ್ಯಯನ ಅವಶ್ಯ. ಎದೆಗೆ ಬಿದ್ದ ಅಕ್ಷರ ವಿಚಾರವಂತಿಕೆ ಮತ್ತು ವಿನಮ್ರತೆಯನ್ನು ಕಲಿಸುತ್ತದೆ. ಆಧುನಿಕ ಪರಿಕರಗಳನ್ನು ಅವಲಂಭಿಸಿ ಐಶಾರಾಮಿ ಬದುಕಿನ ಹಿಂದೆ ಓಡುವ ಬದಲು ಕೃಷಿ ಮತ್ತು ಗ್ರಾಮೀಣ ಬದುಕಿನಲ್ಲಿ ಖುಷಿ ಕಂಡುಕೊಳ್ಳಬೇಕಿದೆ. ದುಡ್ಡು ಭೋಗ ವಸ್ತುಗಳು ಈಗ ಶ್ರೀಮಂತಿಕೆಯ ಮಾನದಂಡವಲ್ಲ, ಶುದ್ಧ ನೀರು, ಸ್ವಚ್ಛ ಪರಿಸರ, ಪ್ರಕೃತಿದತ್ತ ಕಾಡು, ಆರೋಗ್ಯಭಾಗ್ಯದೊಂದಿಗೆ ಆನಂದ ಕಂಡುಕೊಳ್ಳುವವರೇ ಈಗ ನಿಜವಾದ ಶ್ರೀಮಂತರು ಎಂದ ಅವರು ಮಕ್ಕಳ ಶಿಕ್ಷಣ ಕ್ರಮದಲ್ಲಿಲ್ಲದ ಈ ಮೌಲ್ಯಗಳನ್ನು ಮಕ್ಕಳ ಸಾಹಿತ್ಯದ ಮೂಲಕ ಕಟ್ಟಿಕೊಡಬೇಕಿರುವ ಅವಶ್ಯಕತೆಯನ್ನು ಒತ್ತಿ ಹೇಳಿದರು.ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕೃತ್ರಿಮ ಬುದ್ಧಿಮತ್ತೆಯ ಮೊರೆ ಹೋಗಿರುವ ಮನುಷ್ಯ ತನ್ನೆಲ್ಲಾ ಮಾನವೀಯ ಸ್ಪಂದನೆ, ಸಂಬಂಧಗಳನ್ನು ಕತ್ತರಿಸಿಕೊಳ್ಳುತ್ತಿದ್ದಾನೆ. ಇದರಿಂದ ಸಂವೇದನಾಶೀಲತೆ, ಬೌದ್ಧಿಕ ಕತೃತ್ವನಾಶವಾಗಿ ಮನುಷ್ಯ ವೈವಿಧ್ಯತೆಯನ್ನು ಕಳೆದುಕೊಂಡು ಏಕರೂಪಿ ಯಂತ್ರವಾಗುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಬಿಳಿಗೆರೆ ಕೃಷ್ಣಮೂರ್ತಿ ಹಾಗೂ ಹುಲಿಕಲ್ ನಟರಾಜ್ ರವರನ್ನು ಸನ್ಮಾನಿಸಲಾಯಿತು. ಸಾ.ಶಿ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಕೊಂಡಜ್ಜಿ ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಂ, ರೋಟರಿ ಟ್ರಸ್ಟ್ ಅಧ್ಯಕ್ಷ ಟಿ.ಎಸ್.ಪ್ರಕಾಶ್‌ ಗುಪ್ತಾ, ವೀರಶೈವ ಮುಖಂಡ ರೇಣುಕಾ ಪ್ರಸಾದ್, ಚಂದ್ರಶೇಖರ್, ತುಕಾರಾಂ, ಗ್ಯಾಸ್ ಪ್ರಭು ಸೇರಿದಂತೆ ಇತರರು ಭಾಗವಹಿಸಿದ್ದರು. ಲತಾರಾಜ್‌ಕುಮಾರ್ ನಿರೂಪಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌