ವಾತಾವರಣದಲ್ಲಿ ತೇವಾಂಶ: ರೇಷ್ಮೆಗೂಡಿಗೆ ಬೆಲೆ ಕುಸಿತ

KannadaprabhaNewsNetwork |  
Published : May 28, 2025, 11:49 PM IST
ವಿಜೆಪಿ೨೭ವಿಜಯಪುರ ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗಿರುವ ರೇಷ್ಮೆಗೂಡು ಖರೀದಿಸಲು ಪರಿಶೀಲನೆ ನಡೆಸಿದ ನೂಲು ಬಿಚ್ಚಾಣಿಕೆದಾರರು. | Kannada Prabha

ಸಾರಾಂಶ

ವಿಜಯಪುರ: ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಬೀಳುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ, ರೇಷ್ಮೆಗೂಡಿನಿಂದ ಸರಿಯಾಗಿ ನೂಲು ಬಿಚ್ಚಾಣಿಕೆ ಆಗದ ಕಾರಣ, ರೇಷ್ಮೆಗೂಡಿಗೆ ಸಿಗಬೇಕಾಗಿರುವ ಬೆಲೆ ಇಳಿಮುಖವಾಗುತ್ತಿದ್ದು, ೭೦೦ ರು.ಗಳಿಗೆ ಮಾರಾಟವಾಗುತ್ತಿದ್ದ ಕೆ.ಜಿ ರೇಷ್ಮೆ ಗೂಡು ಇದೀಗ ೫೩೦ಕ್ಕೆ ಇಳಿಕೆಯಾಗಿದೆ.

ವಿಜಯಪುರ: ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಬೀಳುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ, ರೇಷ್ಮೆಗೂಡಿನಿಂದ ಸರಿಯಾಗಿ ನೂಲು ಬಿಚ್ಚಾಣಿಕೆ ಆಗದ ಕಾರಣ, ರೇಷ್ಮೆಗೂಡಿಗೆ ಸಿಗಬೇಕಾಗಿರುವ ಬೆಲೆ ಇಳಿಮುಖವಾಗುತ್ತಿದ್ದು, ೭೦೦ ರು.ಗಳಿಗೆ ಮಾರಾಟವಾಗುತ್ತಿದ್ದ ಕೆ.ಜಿ ರೇಷ್ಮೆ ಗೂಡು ಇದೀಗ ೫೩೦ಕ್ಕೆ ಇಳಿಕೆಯಾಗಿದೆ.

ಮೋಡ ಮುಸುಕಿದ ವಾತಾವರಣ, ತೇವಾಂಶ ಹೆಚ್ಚಳದಿಂದ ಹಣ್ಣಾಗುತ್ತಿರುವ ರೇಷ್ಮೆಹುಳ ತಂಡಿಯಿಂದಾಗಿ ಚಂದ್ರಿಕೆಗಳಿಗೆ ಹಾಕಿದರೂ ಸರಿಯಾಗಿ ಗೂಡು ಕಟ್ಟುತ್ತಿಲ್ಲ. ಇಂತಹ ಗೂಡು ಮಾರುಕಟ್ಟೆಗೆ ತಂದರೂ, ಗೂಡು ಪರೀಕ್ಷಿಸುವ ನೂಲು ಬಿಚ್ಚಾಣಿಕೆದಾರರು, ನೂಲು ಬಿಚ್ಚಾಣಿಕೆಯಾಗುವುದಿಲ್ಲವೆಂದು ಈ ಹರಾಜಿನಲ್ಲಿ ಕಡಿಮೆ ಬೆಲೆ ನೀಡುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸಚಂದ್ರಿಕೆಗಳಿಗೆ ಹುಳ ಹಾಕಿ, ತಂಡಿಯಾಗದಂತೆ ವಿದ್ಯುತ್ ಬಲ್ಭ್‌ಗಳನ್ನು ಹಾಕಿದರೆ, ತೇವಾಂಶದ ನಡುವೆಯೂ ಸ್ವಲ್ಪ ಗುಣಮಟ್ಟ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಬೆಲೆಯೂ ಸಿಗುತ್ತದೆ. ಆದರೆ, ಎಲ್ಲಾ ರೈತರು ಹೀಗೆ ಮಾಡಲು ಸಾಧ್ಯವಿಲ್ಲ ಎಂಬುದು ರೈತರ ವಾದವಾಗಿದೆ.

ಮುಂಗಡ ಹಣಕೊಟ್ಟು ಗೂಡು ಖರೀದಿ: ರೇಷ್ಮೆ ಬೆಳೆಗಾರರಿಗೆ ಅಗತ್ಯವಿರುವ ಮುಂಗಡ ಬಂಡವಾಳ ಕೊಡುವ ನೂಲು ಬಿಚ್ಚಾಣಿಕೆದಾರರು, ಗೂಡು ಖರೀದಿಸುವಾಗ ಮಾರುಕಟ್ಟೆಯಲ್ಲಿ ಸಿಗುವಂತಹ ಬೆಲೆಗಿಂತಲೂ ಕಡಿಮೆ ಬೆಲೆಗೆ ಗೂಡು ಖರೀದಿ ಮಾಡಿಕೊಳ್ಳುತ್ತಾರೆ. ಸ್ವಲ್ಪ ದಿನಗಳ ಕಾಲ ಸಮಯ ತೆಗೆದುಕೊಂಡು ರೈತರಿಗೆ ಹಣ ನೀಡುತ್ತಾರೆ. ಇದರಿಂದ ನೂಲು ಬಿಚ್ಚಾಣಿಕೆದಾರರು ಹಾಗೂ ರೈತರ ನಡುವೆ ಉತ್ತಮ ಬಾಂಧವ್ಯವೂ ಏರ್ಪಡುತ್ತಿದೆ.

ಸ್ಥಳೀಯ ಗೂಡು ಮಾರುಕಟ್ಟೆಗೆ ಬರುತ್ತಿಲ್ಲ:

ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿನ ರೈತರು ಬೆಳೆಯುತ್ತಿರುವ ಗೂಡನ್ನು ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಿಲ್ಲ. ಬದಲಿಗೆ, ನೂಲು ಬಿಚ್ಚಾಣಿಕೆದಾರರೇ ನೇರವಾಗಿ ರೇಷ್ಮೆ ಬೆಳೆಗಾರರ ಮನೆಗಳಿಗೆ ಹೋಗಿ ಗೂಡು ಖರೀದಿಸಿಕೊಂಡು ಬರುತ್ತಿರುವ ಕಾರಣ, ಮಾರುಕಟ್ಟೆಗೆ ಸ್ಥಳೀಯ ಗೂಡು ಬರುತ್ತಿಲ್ಲ. ಆಂಧ್ರಪ್ರದೇಶದ ಕುಪ್ಪಂ, ಬಂಗಾರಪೇಟೆ, ಶ್ರೀನಿವಾಸಪುರ ಮುಂತಾದ ಕಡೆಗಳಿಂದ ಬರುತ್ತಿರುವ ಗೂಡಿನಿಂದ ಮಾರುಕಟ್ಟೆ ನಡೆಯುತ್ತಿದೆ.

ಬ್ಯಾಂಕುಗಳಲ್ಲಿ ಸಾಲಕ್ಕೆ ಜಮೆ ಮಾಡುವ ಭಯ:

ರೇಷ್ಮೆಗೂಡು ಮಾರುಕಟ್ಟೆಗೆ ಗೂಡು ತೆಗೆದುಕೊಂಡು ಹೋದರೆ, ಹರಾಜಾದ ನಂತರ ಗೂಡಿನ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಾರೆ. ನಾವು ಬ್ಯಾಂಕುಗಳಲ್ಲಿ ಕೃಷಿಗಾಗಿ, ಬೆಳೆ ನಾಟಿಗಾಗಿ ಮಾಡಿಕೊಂಡಿರುವ ಸಾಲಕ್ಕೆ ಗೂಡಿನ ಹಣವನ್ನು ಜಮೆ ಮಾಡಿಕೊಳ್ಳುತ್ತಾರೆ ಎನ್ನುವ ಭಯದಿಂದ ಬಹುತೇಕ ರೈತರು ತಾವು ಬೆಳೆದ ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಿಲ್ಲದ ಕಾರಣ, ಮಾರುಕಟ್ಟೆಗೆ ಆವಕವಾಗಬೇಕಾಗಿರುವ ಗೂಡಿನ ಪ್ರಮಾಣ ಕಡಿಮೆಯಾಗಿದೆ.

ಹೊಡೆದಿರುವ ಬಾಕ್ಸ್‌ಗಳು:

ಮಾರುಕಟ್ಟೆಗೆ ತರುವ ಗೂಡು ಹರಾಜಾದ ನಂತರ, ಗೂಡು ಬಾಕ್ಸ್ ಗಳಿಗೆ ತುಂಬಿಸಿ, ಬಾಕ್ಸ್ ಗಳನ್ನು ತಳ್ಳಿಕೊಂಡು ಹೋಗಿ ತೂಕ ಮಾಡಿಬೇಕು. ಬಾಕ್ಸ್ ಗಳು ಹೊಡೆದು ಹೋಗಿರುವ ಕಾರಣ, ಒಂದಷ್ಟು ಗೂಡು ಸೋರಿಕೆಯಾಗುತ್ತಿದ್ದು, ಹೊಸ ಬಾಕ್ಸ್ ಗಳನ್ನು ಒದಗಿಸಬೇಕು ಎಂದು ನೂಲು ಬಿಚ್ಚಾಣಿಕೆದಾರರು ಒತ್ತಾಯಿಸಿದ್ದಾರೆ.

ನಷ್ಟವಾದರೂ ಉತ್ತಮ ಬೆಲೆ ಕೊಡುತ್ತಿದ್ದೇವೆ:

ರೈತರು ತೆಗೆದುಕೊಂಡು ಬರುತ್ತಿರುವ ಗೂಡಿನಿಂದ ನೂಲು ಬಿಚ್ಚಾಣಿಕೆ ಸರಿಯಾಗಿ ಆಗದಿದ್ದರೂ, ನಾವು ಅವರಿಗೆ ಉತ್ತಮ ಬೆಲೆ ಕೊಟ್ಟು ಗೂಡು ಖರೀದಿ ಮಾಡಿಕೊಳ್ಳುತ್ತಿದ್ದೇವೆ ಎಂದು ನೂಲು ಬಿಚ್ಚಾಣಿಕೆದಾರ ಜಬಿವುಲ್ಲಾ ಹೇಳಿದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರ ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗಿರುವ ರೇಷ್ಮೆಗೂಡು ಖರೀದಿಸಲು ಪರಿಶೀಲನೆ ನಡೆಸಿದ ನೂಲು ಬಿಚ್ಚಾಣಿಕೆದಾರರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ