ರಸ್ತೆ, ಪ್ರವಾಸೋದ್ಯಮ ಅಭಿವೃದ್ಧಿಗೆ ₹100 ಕೋಟಿ ಅನುದಾನ: ಎಂ.ಶ್ರೀನಿವಾಸ್‌

KannadaprabhaNewsNetwork |  
Published : Aug 08, 2025, 01:00 AM IST
ನರಸಿಂಹರಾಜಪುರ ಪ್ರವಾಸಿ ಮಂದಿರದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಮಗದ ಅಧ್ಯಕ್ಷ  ಎಂ.ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನರಸಿಂಹರಾಜಪುರದ ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಇತರ ಅಭಿವೃದ್ದಿ ಕಾಮಗಾರಿಗಾಗಿ 100 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ ನರಸಿಂಹರಾಜಪುರದ ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಇತರ ಅಭಿವೃದ್ದಿ ಕಾಮಗಾರಿಗಾಗಿ 100 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಸ್ತೆ ಅಗಲೀಕರಣಕ್ಕಾಗಿ ಅನುದಾನ ನೀಡುವಂತೆ ಮನವಿ ಮಾಡಿದ್ದೆ.ನನ್ನ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರ ಸರ್ಕಲ್‌ನಿಂದ ಬಸ್ತಿಮಠ ಸಮೀಪದ ಸುಂಕದಕಟ್ಟೆಯವರೆಗೆ ರಸ್ತೆ ಅಗಲೀಕರಣಕ್ಕಾಗಿ 60 ಕೋಟಿ ರುಪಾಯಿ ಅನುದಾನ ಮಂಜೂರು ಮಾಡಿದ್ದಾರೆ ಎಂದರು.

ಅಲ್ಲದೆ ಹೊನ್ನೇಕೊಡಿಗೆ- ನರಸಿಂಹರಾಜಪುರ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ 35 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದಾರೆ. ಸೇತುವೆ ಸಮೀಪದಿಂದ ನರಸಿಂಹರಾಜಪುರ ಪಟ್ಟಣಕ್ಕೆ ಬರಲು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಒಟ್ಟು 100 ಕೋಟಿ ರುಪಾಯಿಯನ್ನು ಸಿದ್ದರಾಮಯ್ಯ ಅವರೇ ಆಸಕ್ತಿ ವಹಿಸಿ ಮಂಜೂರು ಮಾಡಿಸಿದ್ದಾರೆ ಎಂದರು.

ನರಸಿಂಹರಾಜಪುರ ಪಟ್ಟಣದ ರಸ್ತೆ ತುಂಬಾ ಕಿರಿದಾಗಿದೆ. 1915ರಲ್ಲಿ ಮಹಾರಾಜರ ಕಾಲದಲ್ಲಿ ರಸ್ತೆ ಕಾಮಗಾರಿ ನಡೆದಿತ್ತು. ನಂತರ ಈ ರಸ್ತೆ ಅಗಲೀಕರಣವಾಗಿರಲಿಲ್ಲ. ಈಗ ವಾಹನಗಳ ಸಂಖ್ಯೆ ವಿಪರೀತ ಜಾಸ್ತಿಯಾಗಿದ್ದು ರಸ್ತೆಯ ಬದಿ ಪಾರ್ಕಿಂಗ್‌ ಮಾಡಲು ಜಾಗ ಇಲ್ಲವಾಗಿದೆ. ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆಯು ತುಂಬಾ ಕಿರಿದಾಗಿದೆ ಎಂದರು.

ಹೊನ್ನೇಕೊಡಿಗೆ - ನರಸಿಂಹರಾಜಪುರ ಸಂಪರ್ಕ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು 14 ಪಿಲ್ಲರ್‌ಗಳ ಪೈಕಿ 10 ಪಿಲ್ಲರ್ ಮುಕ್ತಾಯವಾಗಿದ್ದು ಉಳಿದ 4 ಪಿಲ್ಲರ್ ಕಾಮಗಾರಿ ಆಗಬೇಕಾಗಿದೆ ಎಂದರು.

ಸಂಪರ್ಕ ಸೇತುವೆ ಕಾಮಗಾರಿ ವೀಕ್ಷಣೆ:

ಗುರುವಾರ ಸಂಜೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ 35 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊನ್ನೇಕೊಡಿಗೆ-ನರಸಿಂಹರಾಜಪುರ ಸಂಪರ್ಕ ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪ್ರವಾಸಿ ಮಂದಿರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಲು ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು, ಅಧಿಕಾರಿಗಳು ಹಾಗೂ ಮುಖಂಡರ ಸಭೆ ನಡೆಸಲಿದ್ದಾರೆ.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಮಾಜಿ ಸದಸ್ಯ ಸುನೀಲ್ ಕುಮಾರ್, ಮುಖಂಡರಾದ ಗಾಂಧಿಗ್ರಾಮ ನಾಗರಾಜ್, ನಾರಾಯಣಮೂರ್ತಿ ಇದ್ದರು.

ರಸ್ತೆ ಅಗಲೀಕರಣಕ್ಕೆ ಜನರ ಸಹಕಾರ ಅಗತ್ಯ

ನರಸಿಂಹರಾಜಪುರ ಪಟ್ಟಣದ ಜನರು ರಸ್ತೆ ಅಗಲೀಕರಕ್ಕಾಗಿ ಸಹಕಾರ ನೀಡಬೇಕು ಎಂದು ಎಂ.ಶ್ರೀನಿವಾಸ್ ಮನವಿ ಮಾಡಿದರು. ನರಸಿಂಹರಾಜಪುರ ರಸ್ತೆ ಅಗಲೀಕರಣ ಮಾಡಿದರೆ ಪಟ್ಟಣದ ನಕ್ಷೆಯೇ ಬದಲಾಗಿ ಸೌಂದರ್ಯ ಹೆಚ್ಚಾಗಲಿದೆ. ಪಟ್ಟಣದ ಪ್ರತಿಯೊಬ್ಬರೂ ತಮ್ಮ ಊರಿನ ಕಾರ್ಯ ಎಂದು ರಸ್ತೆ ಅಗಲೀಕರಣಕ್ಕಾಗಿ ಮುಂದೆ ಬಂದು ಕೆಲಸಕ್ಕೆ ಸಹಕಾರ ನೀಡಬೇಕು ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ರೆಸಾರ್ಟ್‌, ತ್ರಿ ಸ್ಟಾರ್ ಹೋಟೆಲ್‌

ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು 3 ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಚಿಕ್ಕಮಗಳೂರು ಸಮೀಪದ ಮುಳ್ಳಯ್ಯನಗಿರಿ, ನರಸಿಂಹರಾಜಪುರ ತಾಲೂಕಿನ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಸಮೀಪ 3 ಎಕ್ರೆ ಜಾಗದಲ್ಲಿ ರೆಸಾರ್ಟ್ ಹಾಗೂ ಇತರ ಕಾಮಗಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಯಾವುದಾದರೂ ಒಂದು ಜಾಗದಲ್ಲಿ 3 ಸ್ಟಾರ್ ಹೋಟೆಲ್ ಮಾಡಲಾಗುವುದು ಎಂದು ಎಂ.ಶ್ರೀನಿವಾಸ್ ತಿಳಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್