ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಗೆ ಅವಧಿಗೆ ಮುನ್ನವೇ ರಾಸುಗಳು ಆಗಮಿಸಿದ್ದು ಜಾತ್ರೆ ಮಾಳ ಜನ-ಜಾನುವಾರುಗಳಿಂದ ತುಂಬಿ ತುಳುಕುತ್ತಿದೆ.ಹೇಮಗಿರಿ ಬೆಟ್ಟದ ಸುತ್ತ ನಾಲ್ಕು ಕಿ.ಮೀ. ಸುತ್ತಳತೆಯಲ್ಲಿ ಎಲ್ಲಿ ನೋಡಿದರಲ್ಲಿ ದನಗಳು ಕಂಡುಬರುತ್ತಿದ್ದು ಹಳ್ಳಿಕಾರ್ ತಳಿಯ ಎತ್ತುಗಳು ಸೇರಿದಂತೆ ರೈತರು ತಮ್ಮ ತಮ್ಮ ಸಾಕು ಜೋಡೆತ್ತುಗಳನ್ನು ತಂದು ಜಾತ್ರೆಯಲ್ಲಿ ಕಟ್ಟಿದ್ದಾರೆ.
ಹೇಮಾವತಿ ನದಿ ದಂಡೆಯಲ್ಲಿರುವ ಹೇಮಗಿರಿಯ ದನಗಳ ಜಾತ್ರಗೆ ದೂರ ದೂರದಿಂದ ರೈತರು ಆಗಮಿಸಿದ್ದು ದನಗಳ ವ್ಯಾಪಾರ ನಡೆಯುತ್ತಿದೆ. ಬಂಡೀಹೊಳೆ ಗ್ರಾಮದ ಬಿ.ಆರ್.ದರ್ಶನ್ ಎನ್ನುವವರಿಗೆ ಸೇರಿದ ಸುಮಾರು 3.5 ಲಕ್ಷ ಬೆಲೆ ಬಾಳುವ ಹಳ್ಳಿಕಾರ್ ತಳಿಯ ಎತ್ತುಗಳು ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ.ಬೆಟ್ಟದ ತಪ್ಪಲಿನಲ್ಲಿ ಮಿಠಾಯಿ ಅಂಗಡಿಗಳ ಸಾಲು ಜನರನ್ನು ಆಕರ್ಷಿಸುತ್ತಿದೆ. ಜಾತ್ರೆ ನೋಡೊ ಸಂಭ್ರಮಿಸಿಲು ಜನ ಪ್ರವಾಹವೇ ಹರಿದು ಬರುತ್ತಿದ್ದು ಹೇಮಗಿರಿ ಜಾತ್ರೆ ಜನಾಕರ್ಷಣೆ ಪಡೆದುಕೊಂಡಿದೆ.
ಶ್ರೀಕಲ್ಯಾಣರಮಣ ಸ್ವಾಮಿ ಬ್ರಹ್ಮರಥೋತ್ಸವ:ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ ಫೆ.5 ರಂದು ಬೆಳಗ್ಗೆ 10 ರಿಂದ 10.20 ಗಂಟೆಯೊಳಗೆ ನಡೆಯಲಿದೆ. ಬ್ರಹ್ಮರಥೋತ್ಸವದ ಪೂಜಾಧಿ ಕಾರ್ಯಕ್ರಮಗಳು ಜ.28 ರಿಂದಲೇ ಹೇಮಗಿರಿ ಬೆಟ್ಟದಲ್ಲಿ ಆರಂಭಗೊಳ್ಳಲಿವೆ. ಜ.28 ರಂದು ಶ್ರೀ ಕಲ್ಯಾಣ ವೆಂಟಕರಮಣ ಸ್ವಬಾಮಿಯ ಉತ್ಸವ ಮೂರ್ತಿಯನ್ನು ಬಂಡೀಹೊಳೆ ಗ್ರಾಮದಿಂದ ಹೇಮಗಿರಿ ಬೆಟ್ಟಕ್ಕೆ ತರಲಾಗುವುದು. ಜ.29 ಅಮಾವಾಸ್ಯೆ. ಜ. 30 ರಂದು ಬೆಳಗ್ಗೆ 10 ಗಂಟೆಗೆ ಹೇಮಗಿರಿ ಕಲ್ಯಣ ವೆಂಕಟರಮಣಸ್ವಾಮಿ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಜ.31 ರಂದು ರಾತ್ರಿ ಉತ್ಸವ ಅಂಕುರಾರ್ಪಣ ಕಾರ್ಯಕ್ರಮ ನಡೆಯಲಿದೆ.
ಫೆ.1 ಮತ್ತು ಫೆ.2 ರಂದು ರಾತ್ರಿ 8 ಗಂಟೆಗೆ ದೇವರ ಉತ್ಸವ, ಫೆ.3 ರಾತ್ರಿ 8 ಗಂಟೆಗೆ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಪ್ರಹ್ಲಾದೋತ್ಸವ ಹಾಗೂ ರಾತ್ರಿ ಉತ್ಸವ, ಪುಷ್ಪ ಮಂಟಪೋತ್ಸವ, ಫೆ.4 ರ ಮಧ್ಯಾಹ್ನ 1 ಗಂಟೆಗೆ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇವರ ಉತ್ಸವವನ್ನು ಮಂಟಪಕ್ಕೆ ಬಿಜು ಮಾಡಿಸುವುದು ಮತ್ತು ಬ್ರಾಹ್ಮಣರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ರಾತ್ರಿ 8 ಗಂಟೆಗೆ ದೇವರ ಉತ್ಸವ, ಕಲ್ಯಾಣೋತ್ಸವ ಮತ್ತು ಕಲ್ಯಾಣ ಮಂಟಪ ಸೇವೆ ನಡೆಯಲಿದೆ. ದೇವಾಲಯದ ಆವರಣದಲ್ಲಿರುವ ಮೂಲ ಅಮ್ಮನವರಿಗೆ ಅಲಂಕಾರ ಸೇವೆಗಳು ನಡೆಯಲಿವೆ.ಫೆ.5 ರಂದು ಬ್ರಹ್ಮ ರಥೋತ್ಸವ ವೈದಿಕ ವಿಧಿ ವಿಧಾನಗಳ ಅನುಸಾರ ನಡೆಯಲಿದೆ . ಫೆ.6 ರಿಂದ 8 ರವರೆಗೆ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಾಮಿಯ ಮಂಟಪೋತ್ಸವ, ಶಯನೋತ್ಸವ, ಅನ್ನ ಸಂತರ್ಪಣೆ ಮುಂತಾದ ಕಾರ್ಯಕ್ರಮಗಳನು ನಡೆಯಲಿವೆ. ಫೆ.9 ರಂದು ರಾತ್ರಿ 8 ಗಂಟೆಗೆ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಫೆ.10 ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಿ ಸಂಜೆ ಉತ್ಸವ ಮೂರ್ತಿಯನ್ನು ಬಂಡಿಹೊಳೆ ಗ್ರಾಮದ ಸ್ವಸ್ಥಾನಕ್ಕೆ ಬಿಜು ಮಾಡಿಸುವ ಮೂಲಕ ಜಾತ್ರಾ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ ಎಂದು ದೇವಾಲಯ ಸಮಿತಿ ತಿಳಿಸಿದೆ.