ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಸೂರಿನಲ್ಲಿ ಆ.೨೬ ಮತ್ತು ೨೭ರಂದು ನಡೆಯಲಿರುವ ಎಐಟಿಯುಸಿ ಸಂಘಟಿತ ೪ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಚಾಮರಾಜನಗರದಿಂದ ಬಿಡದಿಯವರೆಗೂ ಪ್ರಚಾರ ಜಾಥಾಕ್ಕೆ ಮಂಗಳವಾರ ನಗರದ ಭುವನೇಶ್ವರಿ ವೃತ್ತದಲ್ಲಿ ಚಾಲನೆ ನೀಡಲಾಯಿತು.ಹಿರಿಯ ಪತ್ರಕರ್ತ ಅಬ್ರಹಾಂ ಡಿಸಿಲ್ವ ಚಾಲನೆ ನೀಡಿ ಸಮ್ಮೇಳನಕ್ಕೆ ಶುಭ ಕೋರಿದರು. ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ದೇಶದ ಸಂಪತ್ತನ್ನು ಸೃಷ್ಟಿ ಮಾಡುವಲ್ಲಿ ರೈತರಂತೆ, ಕಾರ್ಮಿಕರದ್ದು ಕೂಡಾ ಸಿಂಹಪಾಲು. ಆದರೆ ಇಂದು ಈ ಶ್ರಮಿಕ ವರ್ಗದ ಕತ್ತುಹಿಸುಕುವ ಕೆಲಸವನ್ನು ಬಂಡವಾಳಶಾಹಿ ಮಾಲಿಕರ ಪರವಾಗಿ ಇರುವ ಸರ್ಕಾರಗಳು ಮಾಡುತ್ತಲೇ ಬಂದಿವೆ, ಕಾರ್ಮಿಕ ಮತ್ತು ರೈತ ಚಳವಳಿಯನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.ದುಡಿಯುವ ಜನರ ಬದುಕು ಸಂಕಟಮಯವಾಗಿರುವ ಈ ಸಂದರ್ಭದಲ್ಲಿ ಆಳುವ ಸರ್ಕಾರಗಳು ಬಡಜನರ- ಕಾರ್ಮಿಕರ ವಿರುದ್ಧ ಅನುಸರಿಸುವ ನೀತಿ ನಿಲುವುಗಳ ವಿರುದ್ಧ ಬಲಿಷ್ಠ ಹೋರಾಟ ರೂಪಿಸಲು ಕಾರ್ಮಿಕ ವರ್ಗ ಸಜ್ಜಾಗಬೇಕಾಗಿದೆ ಎಂದರು. ಕಾಲಕ್ರಮೇಣ ಮನುಷ್ಯರ ಸಹಾಯವಿಲ್ಲದೇ ಕೈಗಾರಿಗಳು ಸ್ಥಾಪನೆಯಾಗುವ ಕಾಲ ದೂರವಿಲ್ಲ, ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ, ಹೊರಗಿನವರು ಬಂದು ಉದ್ದಿಮೆಗಳನ್ನು ಸ್ಥಾಪಿಸಿ, ಸ್ಥಳೀಯರಿಗೆ ಕೆಲಸ ಕೊಡದೇ ಸತಾಯಿಯಸುತ್ತಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಕರ್ನಾಟಕ ರಾಜ್ಯ ಸಮಿತಿಯು ೪ನೇ ರಾಜ್ಯ ಸಮ್ಮೇಳನವನ್ನು ಅಕ್ಟೋಬರ್ ೨೬ ಮತ್ತು ೨೭ ರಂದು ಮೈಸೂರಿನಲ್ಲಿ ಸಂಘಟಿಸುತ್ತಿದೆ. ಇಲ್ಲಿ ಪ್ರಬಲವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಬೇಕಾಗಿದೆ ಎಂದರು.
ಎಐಟಿಯುಸಿಯ ಚಂದ್ರಶೇಖರ ಮೇಟಿ ಮಾತನಾಡಿ, ಸರ್ಕಾರಗಳು ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ಶೋಷಣೆ ಮಾಡುತ್ತಿವೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ, ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸುವುದಕ್ಕಾಗಿ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ ಎಂದರು.೪ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನ ಆ.೨೬ ಮತ್ತು ೨೭ರಂದು ಮೈಸೂರಿನಲ್ಲಿ ನಡೆಯಲಿದ್ದು ಇದರ ಹಿನ್ನೆಲೆಯಲ್ಲಿ ಅ. ೧೫ ರಿಂದ ಅ.೧೭ ರವರೆಗೆ ಚಾಮರಾಜನಗದಿಂದ ರಾಮನಗರದ ಬಿಡದಿ ಪಟ್ಟಣದವರೆಗೆ ಪ್ರಚಾರ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಐಟಿಯುಸಿ ಆಕಾಶ್ ಕುಮಾರ್, ಹರೀಶ್, ರಮೇಶ್, ಮುದ್ದುಕೃಷ್ಣ ಇತರರು ಇದ್ದರು.