ಮುಳಗುಂದ ಕೆವಿಜಿ ಬ್ಯಾಂಕ್ ಸ್ಥಳಾಂತರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತು.
ಮುಳಗುಂದ: ಪಟ್ಟಣದ ಕೆವಿಜಿ ಬ್ಯಾಂಕ್ ಮೇಲ್ಮಹಡಿಯ ಕಟ್ಟಡದಲ್ಲಿ ಇಕ್ಕಟ್ಟಾದ ಸ್ಥಳದಲಿದ್ದು, ನೆಲಮಹಡಿ ಇರುವ ಸೂಕ್ತ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಳಗುಂದ ಶಾಖೆಯಿಂದ ಬ್ಯಾಂಕ್ ಸಿಬ್ಬಂದಿ ಮೂಲಕ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆ ಮೇಲ್ ಮಹಡಿಯ ತೀರಾ ಇಕ್ಕಟ್ಟಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಗ್ರಾಹಕರಿಗೆ ಸಮಸ್ಯೆ ಆಗುತ್ತಿದ್ದು, ಕೂಡಲೇ ನೆಲಮಹಡಿ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಮುಳಗುಂದ, ಬಸಾಪೂರ, ಶೀತಾಲಹರಿ, ಚಿಂಚಲಿ, ನೀಲಗುಂದ, ಕಲ್ಲೂರ ಗ್ರಾಮಗಳ ಗ್ರಾಹಕರ 5 ಸಾವಿರಕ್ಕೂ ಹೆಚ್ಚು ಖಾತೆಗಳಿವೆ. ನಿತ್ಯ ಐದನೂರಕ್ಕೂ ಹೆಚ್ಚು ಗ್ರಾಹಕರು ಬ್ಯಾಂಕ್ ಗೆ ಭೇಟಿ ನೀಡುತ್ತಾರೆ. ಈಚೆಗೆ ಸರ್ಕಾರದ ಯೋಜನೆಗಳಿಂದ ಬ್ಯಾಂಕ್ ಜನ ಜಂಗುಳಿಂದ ಕೂಡಿರುತ್ತದೆ. ಇಕ್ಕಟಾದ ಕಟ್ಟಡವಾಗಿದ್ದರಿಂದ ಸರದಿ ಸಾಲಲ್ಲಿ ನಿಂತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ಮಹಿಳಾ ಗ್ರಾಹಕರು ಬರುತ್ತಿದ್ದು, ದಿನಗಟ್ಟಲೆ ಕಾಯುವ ಸ್ಥಿತಿ ಇದೆ. ಸಿಬ್ಬಂದಿ ಮುಂದೆ ಗ್ರಾಹಕರು ಒಮ್ಮಲೆ ಜಮಾಯಿಸುವುದರಿಂದ ಬ್ಯಾಂಕ್ ಸಿಬ್ಬಂದಿಗಳಿಗೂ ಕಿರಿಕಿರಿ ಉಂಟಾಗಿದೆ.
ವೃದ್ಧರಿಗೆ ಮಹಡಿ ಹತ್ತಿ ಇಳಿಯುವುದು ತೊಂದರೆಯಾಗುತ್ತಿದೆ. ಮೇಲಾಗಿ ಬ್ಯಾಂಕ್ ಮುಂದೆ ವಾಹನ ನಿಲುಗಡೆಗೆ ಸ್ಥಳ ಇಲ್ಲದೇ ಇರುವುದರಿಂದ ಬೈಕ್ ಇತರೆ ವಾಹನಗಳನ್ನ ರಸ್ತೆ ಮೇಲೆ ನಿಲ್ಲಿಸುವುದು ಅನಿವಾರ್ಯವಾಗಿದ್ದು ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಸಾವಿರಾರು ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು, ವಾಹನ ನಿಲುಗಡೆ ಮತ್ತು ನೆಲಮಹಡಿ ಇರುವ ಸೂಕ್ತ ಕಟ್ಟಡಕ್ಕೆ ಬ್ಯಾಂಕ್ ಸ್ಥಳಾಂತರ ಮಾಡಬೇಕು. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದರು.
ಈ ವೇಳೆ ಸಂಚಾಲಕ ಮಹಾಂತೇಶ ನಡಗೇರಿ, ರೈತ ಮುಖಂಡ ದೇವರಾಜ ಸಂಗನಪೇಟಿ, ಮಲ್ಲಮ್ಮ ಸಣ್ಣತಮ್ಮನವರ, ಬಸವರಾಜ ನಡಗೇರಿ, ಕುಮಾರ ಮುದಿಯಲ್ಲಪ್ಪನವರ, ಪ್ರಕಾಶ ಗಡದವರ, ಅಪ್ಪಣ್ಣ ಜಾಲಣ್ಣವರ, ಯಲ್ಲಪ್ಪ ಮಾದರ, ಮಹಾಂತೇಶ ಕೆಳಗೇರಿ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.