ಕುರುಗೋಡು: ಮಲ್ಲಪ್ಪನಕೆರೆ ಎಂಬ ಪದ ತೆಗೆದು ಹಾಕಿ, ಸರ್ಕಾರ ಎಂದು ಪಹಣಿಯಲ್ಲಿ ನಮೂದಾಗಿದೆ. ಅದನ್ನು ಪರಿಗಣನೆ ಮಾಡಬೇಕೆಂದು ಆಗ್ರಹಿಸಿ ಕಳೆದ 47 ದಿನದಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಮಂತ್ರಿಗಳು ಧರಣಿ ಸದ್ಯಾಗ್ರಹ ಸ್ಥಳಕ್ಕೆ ಬಂದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕೆರೆ ಪರಂಬೂಕು ಎಂಬ ಪದವನ್ನು ತೆಗೆದು ಸರ್ಕಾರ ಎಂದು ತಿದ್ದುಪಡಿ ಮಾಡಲು ಹಾಗೂ ಸಾಗುವಳಿ ಚೀಟಿ ನೀಡಲು ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ 47ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.ಸರ್ಕಾರಗಳ ನೀತಿಗಳು ಬಡವರು, ದಲಿತರಿಗೆ ಭೂಮಿಯನ್ನು ಕೊಡಲು ಕರ್ನಾಟಕ ಭೂಸುಧಾರಣಾ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಭೂಮಿಯನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಪಿತೂರಿಯಾಗಿದೆ ಎಂದು ಆರೋಪಿಸಿದರು.
ಸರ್ಕಾರವನ್ನು ತಪ್ಪುದಾರಿಗೆ ಎಳೆದಿರುವ ಮತ್ತು ರೈತರಿಗೆ ತಪ್ಪು ಸಂದೇಶದ ಮೂಲಕ ಬೆದರಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವಿಚಾರಣೆಗೊಳಪಡಿಸಿ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಎ. ಮಂಜುನಾಥ ಮಾತನಾಡಿ, ಉಳುವವನೇ ಭೂಮಿಯ ಒಡೆಯನನ್ನಾಗಿಸುವುದರ ಬದಲಾಗಿ ರೈತರನ್ನು ಮರೆತು ಉಳ್ಳವರಿಗೆ ಭೂಮಿ ನೀಡಲು ಕಾನೂನುಗಳನ್ನೇ ಬದಲಾಯಿಸುವ ಸರ್ಕಾರಗಳು ಬಡವರಿಗೆ ಭೂಮಿ ನೀಡಲು ಕಾನೂನನ್ನು ಯಾಕೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.ಸಮಸ್ಯೆ ಪರಿಹಾರವಾಗುವ ವರೆಗೂ ಧರಣಿಯನ್ನು ಮುಂದುವರಿಸುವುದಾಗಿ ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗಾಳಿ ಬಸವರಾಜ, ರೈತ ಮುಖಂಡರಾದ ಎನ್. ಹುಲ್ಲೆಪ್ಪ, ಕೆಂಚಪ್ಪ, ರುದ್ರಪ್ಪ, ಭೀಮಯ್ಯ, ಅಂಬಣ್ಣ, ಕೊಮರಪ್ಪ, ರಾಮಪ್ಪ, ಯಂಕಮ್ಮ, ನಾಗರತ್ನಮ್ಮ ಇತರರು ಪಾಲ್ಗೊಂಡಿದ್ದರು.