ಜೂನ್‌ ಅಂತ್ಯಕ್ಕೆ ಆಡಳಿತಕ್ಕೆ ಚುರುಕು: ಸತೀಶ್‌

KannadaprabhaNewsNetwork | Updated : Jun 16 2024, 11:47 AM IST

ಸಾರಾಂಶ

 ಜೂನ್‌ ಅಂತ್ಯದೊಳಗೆ ಮಹಾನಗರ ಪಾಲಿಕೆ, ಕೆಡಿಪಿ ಸೇರಿದಂತೆ ಪ್ರತಿ ಇಲಾಖೆಗಳ ಸಭೆಗಳನ್ನು ನಡೆಸಿ ಆಡಳಿತಕ್ಕೆ ಚುರುಕು ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

  ಬೆಳಗಾವಿ :  ಜೂನ್‌ ಅಂತ್ಯದೊಳಗೆ ಮಹಾನಗರ ಪಾಲಿಕೆ, ಕೆಡಿಪಿ ಸೇರಿದಂತೆ ಪ್ರತಿ ಇಲಾಖೆಗಳ ಸಭೆಗಳನ್ನು ನಡೆಸಿ ಆಡಳಿತಕ್ಕೆ ಚುರುಕು ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಬುಡಾ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು. ಕಳೆದ ಮೂರು ತಿಂಗಳಿಂದ ಆಡಳಿತ ನಿಧಾನವಾಗಿತ್ತು. ಶೀಘ್ರ ಹೊಸ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕಣಬರ್ಗಿ ಲೇಔಟ್‌ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಹೊಸ ಲೇಔಟ್‌ ಗಳ ವಿನ್ಯಾಸಕ್ಕಾಗಿ ಈಗಾಗಲೇ ನೀಲ ನಕ್ಷೆ ತಯಾರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊಸ ಲೇಔಟ್‌ ಗಳನ್ನು ಮಾಡಬೇಕೋ ಅಥವಾ ಬೇಡವೋ ಎಂಬ ಕುರಿತು ನಿರ್ಧರಿಸುತ್ತೇನೆ. ಹೊಸ ಕಾನೂನುಗಳಿಂದ ರೈತರಿಗೆ ಅನೂಕುಲ ಇದೆ ಎಂದು ಹೇಳಿದರು.

ಬೂಡಾದಲ್ಲಿ ನಡೆದಿರುವ ಅಕ್ರಮ ಬಗ್ಗೆ ಬೆಂಗಳೂರಿನ ಐಎಎಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆ ವರದಿ ಆಧರಿಸಿ ಕ್ರಮವಾಗುತ್ತದೆ. ಸುದೀರ್ಘ ತನಿಖೆಯಾಗಬೇಕಾದರೆ ಸಮಯ ಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಅಕ್ರಮ ಬಡಾವಣೆಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಕ್ರಮ ಇರಲಿ, ಅಧಿಕೃತ ಇರಲಿ, ಬಡಾವಣೆಗಳಿದ್ದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡಬೇಕೆಂಬ ನಿರ್ದೇಶನವಿದೆ. ಹೀಗಾಗಿ ಅಕ್ರಮ ಬಡಾವಣೆಗಳಿದ್ದರೂ ಸೌಲಭ್ಯಗಳನ್ನು ನೀಡುತ್ತಾರೆ ಎಂದರು.

ಖಾನಾಪುರ ಅರಣ್ಯ ಪ್ರದೇಶದಲ್ಲಿ ಲೇಔಟ್‌ ಮಾಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಅಧಿಕಾಗಳು ಅರಣ್ಯ ಪ್ರದೇಶದಲ್ಲಿ ನಿಗಾ ಇಟ್ಟಿರುತ್ತಾರೆ. ಅರಣ್ಯ ಪ್ರದೇಶದ ಸುತ್ತಮುತ್ತ ಖಾಸಗಿ ಜಮೀನು ಇದ್ದರೆ ಅಂತಲ್ಲಿ ಲೇಔಟ್‌ಗಳನ್ನು ಹಾಕಿರಬಹುದು ಎಂದರು.

ಭೂ ಸ್ವಾಧೀನಕ್ಕೂ ಮುನ್ನ ಟೆಂಡರ್‌ ಕರೆಯುವುದು ತಪ್ಪು. ಇಂತಹ ತಪ್ಪುಗಳು ನಡೆದಿವೆ. ಬೆಳಗಾವಿ ರಿಂಗ್‌ ರೋಡ್‌ ಕಾಮಗಾರಿಯಲ್ಲಿಯೂ ತಪ್ಪು ಆಗಿತ್ತು. ಆದರೆ ಈಗ ಸಮಸ್ಯೆ ಸರಿಪಡಿಸಿದ್ದು, ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

Share this article