ರಾಮನಗರ: ಪತಿ ಪತ್ನಿ ನಡುವಿನ ಜಗಳ ಬಿಡಿಸಿದ ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪ್ರಾಣ ಬೆದರಿಕೆವೊಡ್ಡಿರುವ ಘಟನೆ ನಗರದ ಆರ್ ಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ. ನಗರದ ಅರ್ಚಕರಹಳ್ಳಿ ವಾಸಿ ವೆಂಕಟೇಶ್ (23)ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನುಮಂತನಗರ ಬಡಾವಣೆ ವಾಸಿ ದಿನೇಶ್ ಕೃತ್ಯ ಎಸಗಿದವನು. ಗಾಯಾಳು ವೆಂಕಟೇಶ್ ಸಂಬಂಧಿಕರಾದ ದಿನೇಶ್ ಮತ್ತು ಸೌಮ್ಯ ನಡುವಿನ ಜಗಳ ಬಿಡಿಸಿದ್ದರು. ಈ ದ್ವೇಷದ ಹಿನ್ನೆಲೆಯಲ್ಲಿ ಆರ್ ಎಂಸಿ ಮಾರುಕಟ್ಟೆಯಲ್ಲಿ ಕುಳಿತಿದ್ದ ವೆಂಕಟೇಶ್ ಮೇಲೆ ದಿನೇಶ್ ಮಚ್ಚಿನಿಂದ ಏಕಾಏಕಿ ದಾಳಿ ಮಾಡಿದ್ದಾನೆ. ಸ್ಥಳೀಯರು ತಕ್ಷಣ ಗಾಯಾಳನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
80 ಸಾವಿರ ಮೌಲ್ಯದಅಡಿಕೆ ಮೂಟೆ ಕಳ್ಳತನ
ಕುದೂರು: ಮನೆ ಮುಂದೆ ಇಟ್ಟಿದ್ದ ಮೂರು ಮೂಟೆ ಅಡಿಕೆಗಳ ಪೈಕಿ ಎರಡು ಮೂಟೆಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಕುದೂರು ಹೋಬಳಿ ಬಿ.ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಕುಮಾರ್ ಅವರಿಗೆ ಸೇರಿದ ಅಂದಾಜು 175- 180 ಕೆಜಿ ತೂಕದ ಎರಡು ಅಡಿಕೆ ಮೂಟೆಗಳು ಕಳವಾಗಿದ್ದು,ಇದರ ಮೌಲ್ಯ 80 ಸಾವಿರ ರುಪಾಯಿಗಳಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೂಜುಕೋರರ ಬಂಧನ
ರಾಮನಗರ: ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಬಿಡದಿ ಹೋಬಳಿಯ ಕೆಂಪನಹಳ್ಳಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಿಮ್ಮರಾಯಪ್ಪ, ಉದಯ್ ಕುಮಾರ್ , ರಾಮಮೂರ್ತಿ, ಕಾರ್ತಿಕ್ , ದರ್ಶನ್, ನಿತೇಶ್ ಕುಮಾರ್ ಆರೋಪಿಗಳು. ಇವರಿಂದ ಪಣಕ್ಕಿಟ್ಟಿದ್ದ 32,280 ರುಪಾಯಿ ನಗದು, ಒಂದು ಬೈಕ್, ಒಂದು ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಒಟ್ಟು 12 ಮಂದಿ ಜೂಜಾಟದಲ್ಲಿ ತೊಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರು ಮಂದಿ ಪರಾರಿಯಾಗಿದ್ದು, 6 ಮಂದಿ ಸಿಕ್ಕಿಬಿದ್ದಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.