‘ಪತ್ನಿಯ ಅಕ್ರಮ ಸಂಬಂಧ ಪತಿ ಆತ್ಮಹತ್ಯೆಗೆ ಪ್ರಚೋದನೆಯಲ್ಲ’ : ಹೈಕೋರ್ಟ್‌ ಅಭಿಪ್ರಾಯ

KannadaprabhaNewsNetwork |  
Published : Nov 09, 2024, 01:09 AM ISTUpdated : Nov 09, 2024, 05:26 AM IST
ಹೈಕೋರ್ಟ್ | Kannada Prabha

ಸಾರಾಂಶ

ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತ್ನಿಯು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಪರಿಗಣಿಸಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

  ಬೆಂಗಳೂರು : ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತ್ನಿಯು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಪರಿಗಣಿಸಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಆರೋಪದಡಿ ಅಧೀನ ನ್ಯಾಯಾಲಯ ತನಗೆ ವಿಧಿಸಿದ್ದ ಶಿಕ್ಷೆ ಆದೇಶ ರದ್ದುಪಡಿಸುವಂತೆ ಕೋರಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿವಾಸಿ ಪ್ರೇಮಾ ಮತ್ತು ಆಕೆಯ ಪ್ರೇಮಿ ಬಸವಲಿಂಗೇಗೌಡ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣನವರ್‌ ಅವರ ಪೀಠ ಈ ಆದೇಶ ಮಾಡಿದೆ.

ಪ್ರಚೋದನೆ ಎಂದರೆ ನಿರ್ದಿಷ್ಟ ಕೆಲಸವನ್ನು ಮಾಡುವಂತೆ ಪ್ರೇರೇಪಣೆ ನೀಡಿರಬೇಕಾಗುತ್ತದೆ. ಆಗ ಮಾತ್ರ ಅದು ಅಪರಾಧವಾಗುತ್ತದೆ. ಮೇಲ್ಮನವಿ ಸಲ್ಲಿಸಿರುವ ಆರೋಪಿಗಳು ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಪತಿ ಸದಾಶಿವಮೂರ್ತಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಉದ್ದೇಶಪೂರ್ವಕವಾಗಿ ಪ್ರಚೋದನೆಯನ್ನು ಅವರು ನೀಡಿದ್ದರು ಎಂಬುದಕ್ಕೆ ನಿಖರ ಸಾಕ್ಷಿಗಳು ಇರಬೇಕಾಗುತ್ತದೆ. ಇಂತಹ ಸಾಕ್ಷಿ ಇಲ್ಲದ ಪಕ್ಷದಲ್ಲಿ ಅಪರಾಧ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಜತೆಗೆ, ಅಧೀನ ನ್ಯಾಯಾಲಯವು ಪ್ರೇಮಾ ಮತ್ತು ಬಸವಲಿಂಗೇಗೌಡ ಅವರಿಗೆ ವಿಧಿಸಿದ್ದ ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣವೇನು:

ಸದಾಶಿವಮೂರ್ತಿ ಎಂಬುವರನ್ನು ಮದುವೆಯಾಗಿದ್ದ ಪ್ರೇಮಾ, ಬಸವಲಿಂಗೇಗೌಡ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಸದಾಶಿವಮೂರ್ತಿ 2010ರ ಜು.15ರಂದು ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

2010ರ ಜು.10ರಂದು ಸಂಜೆ 4 ಗಂಟೆಗೆ ಸದಾಶಿವಮೂರ್ತಿ ಮನೆ ಮುಂದೆ ಹೋಗಿದ್ದ ಬಸವಲಿಂಗೇಗೌಡ, ‘ನೀನು ಸಾಯಿ. ಆಗ ನಾನು ಮತ್ತು ಪ್ರೇಮ ಸಂತೋಷದಿಂದ ಜೀವನ ನಡೆಸುತ್ತೇವೆ’ ಎಂದು ಹೇಳಿ ಅವಮಾನ ಮಾಡಿದ್ದರು. ಇದರಿಂದ ಅಸಮಾಧಾನಗೊಂಡು ಸದಾಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮಂಡ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಪ್ರೇಮಾ ಮತ್ತು ಬಸವಲಿಂಗೇಗೌಡಗೆ ಶಿಕ್ಷೆ ವಿಧಿಸಿ 2013ರ ಜ.1ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ‘ನೀನು ಹೋಗಿ ಸಾಯಿ. ನೀನು ಸತ್ತರೆ ನಾವು ಸಂತೋಷದಿಂದ ಜೀವನ ನಡೆಸುತ್ತೇವೆ’ ಎಂಬುದಾಗಿ ಆರೋಪಿಗಳು ಮೃತನಿಗೆ ಹೇಳಿದ ಮಾತ್ರಕ್ಕೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧವಾಗುವುದಿಲ್ಲ. ಮೃತನು ತನ್ನ ಪತ್ನಿ ಮತ್ತು ಬಸವಲಿಂಗೇಗೌಡ ಅಕ್ರಮ ಸಂಬಂಧ ಹೊಂದಿದ್ದ ವಿಚಾರದಲ್ಲಿ ಸೂಕ್ಷ್ಮವಾಗಿದ್ದರು. ಅದರಿಂದ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನವಿಕಾಸ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕಾರ್ಕಳ: ಜ್ಞಾನಸುಧ ‘ಜ್ಞಾನ ತೀರ್ಥ-ವಿಟಲ ಸಂಗೀತ ಸಂಜೆ’