ಸುಪಾರಿ ನೀಡಿ ಪತಿ ಕೊಲೆ: ಪತ್ನಿ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Jul 03, 2024, 12:21 AM IST
೧೧ | Kannada Prabha

ಸಾರಾಂಶ

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 6ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸುಪಾರಿ ನೀಡಿ ಪತಿಯನ್ನೇ ಕೊಲೆಗೈದ ಪತ್ನಿ ಸಹಿತ ಐವರ ಆರೋಪ 6ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಮೂಲತಃ ಉಳ್ಳಾಲ, ಪ್ರಸ್ತುತ ಬಿ.ಸಿ.ರೋಡ್‌ ನಿವಾಸಿ ಅಬ್ದುಲ್‌ ಮುನಾಫ್‌ ಯಾನೆ ಮುನ್ನ (41), ಉಳ್ಳಾಲ್‌ ನಿವಾಸಿ ಅಬ್ದುಲ್‌ ರಹಿಮಾನ್‌ (36), ಬೊಳಿಯಾರು ನಿವಾಸಿ ಶಬೀರ್‌ ಯಾನೆ ಶಬ್ಬಿ (31), ಕುತ್ತಾರ್‌ಪದವು ನಿವಾಸಿ ಜಮಾಲ್‌ ಅಹಮದ್‌ (38), ಪಾವೂರು ನೆಬಿಸಾ (40) ಶಿಕ್ಷೆಗೀಡಾದವರು. ಪಾವೂರು ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್‌ (59) ಕೊಲೆಯಾದವರು.

ಪಾವೂರು ನಿವಾಸಿಯಾಗಿದ್ದ ಇಸ್ಮಾಯಿಲ್‌ಗೆ ನೆಬಿಸಾ ಜತೆ ಎರಡನೇ ಮದುವೆಯಾಗಿದ್ದು, ಈ ದಂಪತಿಗೆ ನಾಲ್ವರು ಮಕ್ಕಳಿದ್ದರು. ನೆಬಿಸಾಳಿಗೆ ಕುತ್ತಾರ್‌ಪದವು ಜಮಾಲ್‌ ಜತೆ ಅಕ್ರಮ ಸಂಬಂಧವಿದ್ದು, ಇದೇ ವಿಚಾರದಲ್ಲಿ ಇಸ್ಮಾಯಿಲ್‌ ಮತ್ತು ನೆಬಿಸಾ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ನೆಬಿಸಾ, ಜಮಾಲ್‌ ಜತೆ ಸೇರಿಕೊಂಡು ಗಂಡ ಇಸ್ಮಾಯಿಲ್‌ನನ್ನು ಕೊಲೆ ಮಾಡಲು ನಿರ್ಧರಿಸಿ, ಅಬ್ದುಲ್‌ ರಹಿಮಾನ್‌ ಎಂಬಾತನ ಜತೆ ಸೇರಿ ಸಂಚು ರೂಪಿಸಿದ್ದರು.

2016ರ ಫೆ.16ರಂದು ಸಂಜೆ ಆರೋಪಿ ಅಬ್ದುಲ್‌ ರಹಿಮಾನ್‌ ಬೆಂಗಳೂರಿಗೆ ಬಾಡಿಗೆಯಿದೆ ಎಂದು ಹೇಳಿ ಇಸ್ಮಾಯಿಲ್‌ನನ್ನು ನಂಬಿಸಿ ಫರಂಗಿಪೇಟೆಯಿಂದ ಕರೆದೊಯ್ದಿದ್ದ. ಬಿ.ಸಿ.ರೋಡ್‌ ಹೊಟೇಲ್‌ ಮುಂಭಾಗ ಇತರ ಆರೋಪಿಗಳಾದ ಮುನಾಫ್‌ ಮತ್ತು ಶಬೀರ್‌ ಅದೇ ವಾಹನ ಹತ್ತಿಕೊಂಡು ಬೆಂಗಳೂರಿನತ್ತ ಹೊರಟರು. ನೆಲ್ಯಾಡಿಯಲ್ಲಿ ಇಸ್ಮಾಯಿಲ್‌ಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿ ಶಿರಾಡಿಯತ್ತ ತೆರಳಿದ್ದಾರೆ. ಕೆಂಪುಹೊಳೆ ಸಮೀಪ ತಲುಪಿದಾಗ ಏಸ್‌ ವಾಹನ ರಸ್ತೆಯಲ್ಲೇ ಹಾಳಾಗಿ ನಿಲ್ಲುತ್ತದೆ. ಈ ಸಂದರ್ಭ ವಾಹನದಿಂದ ಇಳಿದ ಆರೋಪಿಗಳು ರಕ್ಷಿತಾರಣ್ಯದೊಳಗೆ ಕರೆದೊಯ್ದು ಮೂವರು ಸೇರಿ ಚೂರಿಯಿಂದ ಇರಿದು ಕೊಲೆಮಾಡುತ್ತಾರೆ. ಬಳಿಕ ವಾಹನವನ್ನು ತಾವೇ ರಿಪೇರಿ ಮಾಡಿ ತಂದು ಉಪ್ಪಿನಂಗಡಿ ಬತ್ತೂರು ನೀರಕಟ್ಟೆಬಳಿ ಸಮೀಪ ನಿಲ್ಲಿಸಿದ್ದರು. ಕೊಲೆಗೆ ಸುಪಾರಿ ಕೊಟ್ಟ ಆರೋಪಿ ನೆಬಿಸಾ ತನ್ನ ಮೇಲೆ ಅನುಮಾನ ಬರದಿರಲೆಂದು ಗಂಡ ನಾಪತ್ತೆಯಾಗಿರುವ ಬಗ್ಗೆ ತೊಕ್ಕೊಟ್ಟು ಪೊಲೀಸರಿಗೆ ದೂರು ನೀಡಿದ್ದಳು.

ಕೊನೆಗೂ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಗಂಡನ ಕೊಲೆಗೆ ಸುಪಾರಿ ನೀಡಿದ ನೆಬಿಸಾ, ಇದಕ್ಕಾಗಿ 2.50 ಲಕ್ಷ ರು. ಹಣ ನೀಡಬೇಕಿತ್ತು. ಚಿನ್ನಾಭರಣಗಳನ್ನು ತೊಕ್ಕೊಟ್ಟಿನ ಫೈನಾನ್ಸ್‌ನಲ್ಲಿ ಅಡವಿಟ್ಟು ಹಣ ನೀಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಇದೀಗ ಸಮಗ್ರ ವಿಚಾರಣೆ ನಡೆಸಿದ 6ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ತಿಂಗಳ ಕಂದಮ್ಮ ಬೀದಿನಾಯಿ ದಾಳಿಗೆ ಬಲಿ!
6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್‌ ದಾಳಿ