ಕುಡಿಯಲು ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಗಂಡನ ಕೊಂದು 2 ತುಂಡು ಮಾಡಿ ಗದ್ದೆಗೆಸೆದ ಪತ್ನಿ!

KannadaprabhaNewsNetwork |  
Published : Jan 03, 2025, 01:30 AM ISTUpdated : Jan 03, 2025, 11:12 AM IST
ಪತಿಯನ್ನು ಹತ್ಯೆ ಮಾಡಿದ ಪತ್ನಿ | Kannada Prabha

ಸಾರಾಂಶ

ಕುಡಿಯಲು ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯನ್ನೇ ಪತ್ನಿಯೇ ಉಸಿರುಗಟ್ಟಿ ಹತ್ಯೆ ಮಾಡಿ, ನಂತರ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹಲ್ಲೆ ನಡೆಸಿ, ಶವವನ್ನು ಎರಡು ತುಂಡು ಮಾಡಿದ ಘಟನೆ ನಡೆದಿದೆ.  

  ಬೆಳಗಾವಿ : ಕುಡಿಯಲು ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯನ್ನೇ ಪತ್ನಿಯೇ ಉಸಿರುಗಟ್ಟಿ ಹತ್ಯೆ ಮಾಡಿ, ನಂತರ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹಲ್ಲೆ ನಡೆಸಿ, ಶವವನ್ನು ಎರಡು ತುಂಡು ಮಾಡಿ ಚಿಕ್ಕ ಬ್ಯಾರೆಲ್‌ನಲ್ಲಿ ಹಾಕಿಕೊಂಡು ಹೊಲದಲ್ಲಿ ಎಸೆದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಡಿ.8, 2024ರಂದೇ ನಡೆದಿದ್ದು, ಡಿ.10ರಂದು ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ (50) ಹತ್ಯೆಯಾದ ವ್ಯಕ್ತಿ. ಈತನ ಪತ್ನಿ ಸಾವಿತ್ರಿ ಇಟ್ನಾಳೆ ( 30) ಹತ್ಯೆಮಾಡಿದ ಬಂಧಿತ ಆರೋಪಿ. ತಾನೇ ಹತ್ಯೆ ಮಾಡಿರುವುದಾಗಿ ಆರೋಪಿ ಸಾವಿತ್ರಿ ಒಪ್ಪಿಕೊಂಡಿದ್ದಾಳೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.

ಏನಿದು ಘಟನೆ? ಹೇಗಾಯಿತು?:

ಉಮರಾಣಿಯಲ್ಲಿ ವಾಸವಾಗಿದ್ದ ಶ್ರೀಮಂತ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಮಾತ್ರವಲ್ಲ, ಕುಡಿಯಲು ಹಣ ನೀಡುವಂತೆ ಪತ್ನಿ ಸಾವಿತ್ರಿಯನ್ನು ಪೀಡಿಸುತ್ತಿದ್ದ. ಅದರಂತೆಯೇ ಡಿ.8, 2024ರಂದು ಪತಿ ಶ್ರೀಮಂತ ಹಣ ನೀಡುವಂತೆ ಪೀಡಿಸಿದ್ದಾನೆ. ಇದರಿಂದ ಬೇಸತ್ತ ಸಾವಿತ್ರಿ ಮನೆ ಹೊರಗೆ ಕುಡಿದು ಮಲಗಿದ್ದ ಪತಿಯನ್ನು ಒಳಗೆ ಕರೆದುಕೊಂಡು ಹೋಗಿ, ಕತ್ತು ಹಿಸುಕಿ ಹತ್ಯೆ ಮಾಡುತ್ತಾಳೆ. ನಂತರ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕುತ್ತಾಳೆ. ಈ ವೇಳೆ ಶವ ಸಾಗಿಸುವುದು ತನಗೊಬ್ಬಳಿಗೆ ಕಷ್ಟವಾಗುತ್ತದೆ ಎಂದು ಶವವನ್ನು ಮೀನು ಕುಯ್ಯಲು ಬಳಸುವ ಮಾರಕಾಸ್ತ್ರದಿಂದ ದೇಹವನ್ನು 2 ತುಂಡು ಮಾಡುತ್ತಾಳೆ.

ನಂತರ ತುಂಡಾದ ದೇಹಗಳನ್ನು ಚಿಕ್ಕ ಬ್ಯಾರೆಲ್‌ನಲ್ಲಿ ಹಾಕಿ ತನ್ನ ಮನೆಯಿಂದ 200 ಮೀ. ದೂರದಲ್ಲಿರುವ ಗದ್ದೆವೊಂದರಲ್ಲಿ ದೇಹವನ್ನು ಜೋಡಿಸಿ ಎಸೆದು ಬರುತ್ತಾಳೆ. ನಂತರ ಕೃತ್ಯಕ್ಕೆ ಬಳಸಿದ ಬ್ಯಾರೆಲ್‌ ಅನ್ನು ತೊಳೆದು ಬಾವಿಗೆ ಎಸೆದಿದ್ದಾಳೆ. ಜತೆಗೆ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆಯನ್ನು ಚೀಲದಲ್ಲಿ ಹಾಕಿ ಪ್ಯಾಕ್‌ ಮಾಡಿ, ಮೇಲೆ ಬರದಂತೆ ಮಾಡಲು ಅದಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾಳೆ.

ಕೇಸು ಪತ್ತೆಯಾಗಿದ್ದು ಹೇಗೆ?:

ಮೃತದೇಹವನ್ನು ಎರಡು ತುಂಡಾಗಿ ಕತ್ತರಿಸಿ ಗದ್ದೆಯಲ್ಲಿ ಎಸೆಯಲಾಗಿತ್ತು. ಗದ್ದೆಯಲ್ಲಿದ್ದ ಈ ಶವ ನೋಡಿದ ಗ್ರಾಮಸ್ಥರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಈ ಪ್ರಕರಣದ ಕುರಿತು ಹಲವಾರು ಆಯಾಮಗಳಲ್ಲಿ ತನಿಖೆ ಕೈಗೊಳ್ಳುತ್ತಾರೆ. ಕೆಲವು ವ್ಯಕ್ತಿಗಳನ್ನು ಕೂಡ ವಿಚಾರಣೆ ನಡೆಸುತ್ತಾರೆ. ಕೊನೆಗೆ ಶ್ರೀಮಂತ ಇಟ್ನಾಳೆ ಪತ್ನಿಯ ಮೇಲೆ ಅನುಮಾನ ಬಂದು ಆಕೆಯನ್ನು ಪೊಲೀಸರು ತಮ್ಮದೆಯಾದ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನೇ ಹತ್ಯೆ ಮಾಡಿರುವುದಾಗಿ ಸಾವಿತ್ರಿ ಒಪ್ಪಿಕೊಂಡಿದ್ದಾಳೆ.

ಗಂಡನಿಂದ ನಿರಂತರವಾಗಿ ಕಿರುಕುಳ ಆಗುತ್ತಿತ್ತು. ಶೋಷಣೆ ಮಿತಿಮೀರಿತ್ತು. ಹಾಗಾಗಿ, ಈ ಕೃತ್ಯ ಎಸಗಬೇಕಾಯಿತು ಎಂದು ತನ್ನ ಕೃತ್ಯವನ್ನು ಆಕೆ ಒಪ್ಪಿಕೊಂಡಿದ್ದಾಳೆ. ಪರ ಪುರುಷರ ಜೊತೆಗೆ ಮಲಗುವಂತೆ ಗಂಡ ಪೀಡಿಸುತ್ತಿದ್ದ. ಸದಾ ಜಗಳವಾಡುತ್ತಿದ್ದ. ಮದ್ಯ ಸೇವನೆಗೆ ಹಣ ನೀಡುವಂತೆ, ಸೈಟ್‌ ಮಾರಿ ಬೈಕ್‌ ಕೊಡಿಸುವಂತೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಆರೋಪಿ ಸಾವಿತ್ರಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾಳೆ.

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ದುಡ್ಡಿಗಾಗಿ ಪೀಡಿಸುತ್ತಿದ್ದ ಗಂಡನನ್ನು ಹೆಂಡತಿಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಸಾವಿತ್ರಿ ಇಂಗಳೆ (30) ಎಂಬ ಮಹಿಳೆಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಗಂಡ ಶ್ರೀಮಂತ ಇಂಗಳೆ ಮದ್ಯ ವ್ಯಸನಿಯಾಗಿದ್ದ. ನಿತ್ಯ ಹೆಂಡತಿಗೆ ದುಡ್ಡಿಗಾಗಿ ಪೀಡಿಸುತ್ತಿದ್ದ. ಇದರಿಂದಾಗಿ ಬೇಸತ್ತು ಆತನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ, ಶವವನ್ನು ಎರಡು ತುಂಡಾಗಿ ಕತ್ತರಿಸಿ, ಗದ್ದೆಗೆ ಎಸೆದಿದ್ದಳು. ದುಡ್ಡಿನ ವಿಚಾರವೇ ಈ ಕೊಲೆಗೆ ಕಾರಣ ಎಂಬುದು ಕಂಡುಬಂದಿದೆ.

- ಡಾ.ಭೀಮಾಶಂಕರ ಗುಳೇದ , ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬೆಳಗಾವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!