ರಾಣಿಬೆನ್ನೂರು: ಬಸವ ಜಯಂತಿ ಅಂಗವಾಗಿ ಬುಧವಾರ ನಗರದ ಕೋರ್ಟ್ ಮುಂಭಾಗದ ಟ್ರಾಫಿಕ್ ಸಿಗ್ನಲ್ ಬಳಿ ಜಗಜ್ಯೋತಿ ಬಸವೇಶ್ವರ ವೃತ್ತ ನಾಮಕರಣ ವಿಚಾರ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಬಸವ ಜಯಂತಿ ಹಿನ್ನೆಲೆ ಕೆಲವರು ಮಂಗಳವಾರ ತಡರಾತ್ರಿಯೇ ಟ್ರಾಫಿಕ್ ಸಿಗ್ನಲ್ ಬಳಿ ಬಸವೇಶ್ವರ ಭಾವಚಿತ್ರವನ್ನು ಇರಿಸಿದ್ದರು. ಆದರೆ ನಂತರ ಇದನ್ನು ಪೊಲೀಸರು ತೆರವುಗೊಳಿಸಿದ್ದರು. ಬುಧವಾರ ಬಸವೇಶ್ವರ ಮೂರ್ತಿ ಮೆರವಣಿಗೆಯು ಇಲ್ಲಿಗೆ ಆಗಮಿಸಿದಾಗ ಬಸವೇಶ್ವರ ಭಾವಚಿತ್ರ ಇಲ್ಲದಿರುವುದು ಜನರನ್ನು ಕೆರಳಿಸಿತು. ತಕ್ಷಣ ತೆರವುಗೊಳಿಸಲಾದ ಭಾವಚಿತ್ರವನ್ನು ಹುಡುಕಿ ತಂದು ಅಲ್ಲಿಯೇ ಪುನರ್ ಪ್ರತಿಷ್ಠಾಪಿಸಿದರು. ಈ ಸಮಯದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಬಸವಣ್ಣ 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಮುನ್ನುಡಿ ಬರೆದ ಮೇರುಪುರುಷರಾಗಿದ್ದಾರೆ. ಅವರ ಭಾವಚಿತ್ರವನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಇದಕ್ಕೆ ಜಗಜ್ಯೋತಿ ಬಸವೇಶ್ವರ ವೃತ್ತವೆಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಅಜಯ ಜಂಬಗಿ, ರಾಯಣ್ಣ ಮಾಕನೂರ, ಶೇಖಣ್ಣ ನರಸಗೊಂಡರ, ಬಸವರಾಜ ರೊಡ್ಡನವರ, ಸಿದ್ದು ಚಿಕ್ಕಬಿದರಿ, ರಮೇಶ ಗುತ್ತಲ, ಅನಿಲ ಸಿದ್ದಾಳಿ, ಬಸವರಾಜ ಚಿಮ್ಮಲಗಿ, ಯುವರಾಜ ಬಾರಾಟಕ್ಕೆ, ಅಭಿಷೇಕ ಪಟ್ಟಣಶೆಟ್ಟಿ ಸೇರಿದಂತೆ ನೂರಾರು ಜನರಿದ್ದರು.ಸಂಭ್ರಮದ ಬಸವ ಜಯಂತಿ ಆಚರಣೆ
ನಂತರ ಇಲ್ಲಿಂದ ಹೊರಟ ಮೆರವಣಿಗೆಯು ಭಕ್ತರ ಹರ್ಷೋದ್ಗಾರಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ಜನರು ರಸ್ತೆಗೆ ನೀರು ಹಾಕಿ ಸ್ವಾಗತ ಕೋರಿದರು. ಬಸವ ಜಯಂತಿ ಅಂಗವಾಗಿ ಎತ್ತುಗಳಿಗೆ ಬಲೂನುಗಳು ಸೇರಿದಂತೆ ವಿವಿಧ ವಸ್ತುಗಳಿಂದ ಸಿಂಗರಿಸಲಾಗಿತ್ತು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ ಜಂಬಗಿ, ಸಿದ್ಧು ಚಿಕ್ಕಬಿದರಿ, ಅನಿಲ ಸಿದ್ದಾಳಿ, ಮಲ್ಲಿಕಾರ್ಜುನ ಪೂಜಾರ, ಬಸವರಾಜ ರೊಡ್ಡನವರ, ಬಸವರಾಜ ಚಿಮ್ಮಲಗಿ, ಯುವರಾಜ ಬಾರಾಟಕ್ಕೆ, ಮಲ್ಲಿಕಾರ್ಜುನ ಅಂಗಡಿ, ಕುಮಾರ ಎಳೆಹೊಳಿ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.