ನಾನು ಶಿರಹಟ್ಟಿ ಮಠದ ಭಕ್ತ, ಪ್ರತಿ ಗೆಲುವಿಗೆ ಇಲ್ಲಿ ಬರುವುದು ಸಾಮಾನ್ಯ: ಪ್ರಹ್ಲಾದ ಜೋಶಿ

KannadaprabhaNewsNetwork |  
Published : Sep 01, 2024, 01:47 AM IST
ಶ್ರೀ ಮಠದ ಆವರಣದಲ್ಲಿ ಹಿರಿಯ ಶ್ರೀಗಳಾದ ಫಕ್ಕೀರ ಸಿದ್ಧರಾಮ ಶ್ರೀಗಳೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚರ್ಚಿಸಿದರು.  | Kannada Prabha

ಸಾರಾಂಶ

ನಾನು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು

ಶಿರಹಟ್ಟಿ: ನಾನು ಶಿರಹಟ್ಟಿ ಮಠದ ಪರಮ ಭಕ್ತನಾಗಿದ್ದು, ನನ್ನ ಮೊದಲ ಚುನಾವಣೆಯಿಂದಲೂ ನನ್ನ ಗೆಲುವಿನಲ್ಲಿ ಫಕ್ಕೀರೇಶ್ವರ ಮಠದ ಆಶೀರ್ವಾದ ದೊಡ್ಡದಾಗಿದೆ. ಅದಕ್ಕಾಗಿ ನನಗೆ ಸಮಯ ಸಿಕ್ಕಾಗಲೆಲ್ಲ ಶ್ರೀ ಮಠಕ್ಕೆ ಬಂದು ಗದ್ದುಗೆಯ ದರ್ಶನ, ಶ್ರೀಗಳ ಆಶೀರ್ವಾದ ಪಡೆದು ಹೋಗುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಶನಿವಾರ ಪಟ್ಟಣದ ಫಕ್ಕೀರೇಶ್ವರ ಮಠಕ್ಕೆ ಭೇಟಿ ನೀಡಿ, ಭಕ್ತರ ಸಮ್ಮುಖದಲ್ಲಿ ಫಕ್ಕೀರ ಸಿದ್ಧರಾಮ ಶ್ರೀಗಳ ಆಶೀರ್ವಾದ ಪಡೆದ ಆನಂತರ ಮಾತನಾಡಿದರು.

ನಾನು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು, ಬಹಳಷ್ಟು ಪ್ರಭಾವಿಗಳಾಗಿದ್ದರು. ನನಗೆ ಸಹಜವಾಗಿಯೇ ಭಯವಾಗಿತ್ತು. ಅಂದು ಫಕ್ಕೀರ ಸಿದ್ಧರಾಮ ಶ್ರೀಗಳು ಅದರಗುಂಚಿ ಗ್ರಾಮದಲ್ಲಿ ಭೇಟಿ ಮಾಡಿದಾಗ ಪ್ರಹ್ಲಾದ, ನೀ ಗೆಲ್‌ತೀ ಪಾ ಎಂದು ಆಶೀರ್ವಾದ ಮಾಡಿ ಹೇಳಿದ್ದರು. ಅಲ್ಲಿಂದ ಇಂದಿನವರೆಗೂ ಶ್ರೀಗಳು ಮತ್ತು ಶ್ರೀ ಮಠದ ಆಶೀರ್ವಾದ ನನ್ನ ಮೇಲಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ನನ್ನ ಗೆಲುವಿನಲ್ಲಿ ಫಕ್ಕೀರೇಶ್ವರ ಮಠದ ಆಶೀರ್ವಾದ ದೊಡ್ಡದಿದೆ. ಕೇಂದ್ರದಲ್ಲಿ 2ನೇ ಬಾರಿಗೆ ಮಂತ್ರಿಯಾದ ಆನಂತರ ಕಾರ್ಯ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಠಕ್ಕೆ ಬಂದಿಲ್ಲ, ಇಂದು ಅಲ್ಪ ಸಮಯ ಸಿಕ್ಕಿತ್ತು. ತಕ್ಷಣವೇ ಹೊರಟು ಬಂದಿದ್ದೇನೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಫಕ್ಕೀರ ಸಿದ್ಧರಾಮ ಶ್ರೀಗಳು, ಮೊದಲ ಚುನಾವಣೆಯ ಸಂದರ್ಭದಲ್ಲಿನ ಕ್ಷಣಗಳನ್ನು ನೆನಪಿಸಿಕೊಂಡು, ಈ ಬಾರಿ ನಡೆದ ಚುನಾವಣೆಯ ವೇಳೆಯಲ್ಲಿ ಪ್ರಹ್ಲಾದ ಜೋಶಿ ಗೆದ್ದು, 2ನೇ ಬಾರಿಗೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎಂದು ಹೇಳಿದ್ದೆ, ಮಂತ್ರಿಗಳಾದ ನಂತರ ಬಂದು ಫಕ್ಕೀರೇಶನ ಗದ್ದುಗೆಯ ದರ್ಶನ ಪಡೆಯುವಂತೆ ಸೂಚಿಸಿದ್ದೆ, ಅದಕ್ಕಾಗಿ ಅವರು ಬಂದಿದ್ದಾರೆ. ಅವರು ನಮ್ಮ ಮಠದ ಪರಮ ಭಕ್ತರಾಗಿದ್ದಾರೆ ಎಂದರು.

ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಾಗೂ ಶ್ರೀಮಠದ ಭಕ್ತರು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ