ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪುರಸಭಾ ಮೈದಾನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳು ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎನ್.ಚಲುವರಾಯಸ್ವಾಮಿ ಅವರು ನನ್ನನ್ನು ಸೋಲಿಸುವಂತೆ ಕರೆ ನೀಡಿದ್ದಾರೆ. ಇವರಿಗೆ ನನ್ನನ್ನು ಚುನಾವಣೆಯಲ್ಲಿ ಎದುರಿಸುವ ತಾಕತ್ತಿಲ್ಲದೆ ಮಂಡ್ಯಕ್ಕೆ ರಾಹುಲ್ ಗಾಂಧಿ ಅವರನ್ನು ಕರೆತಂದಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಯಾಗಲು ನನಗೊಂದು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ಕೇಳುತ್ತಿದ್ದಾರೆ. ಅವರೇ ಸರ್ಕಾರದ ಡಿಸಿಎಂ ಆಗಿದ್ದಾರೆ. ನಿಮ್ಮ ಕೈಗೆ ಪೆನ್ನು, ಪೇಪರ್ ಕೊಟ್ಟ ಪರಿಣಾಮ ಇಂದು ನಮ್ಮ ನೀರು ನಮ್ಮ ಹಕ್ಕು ಆಗುವ ಬದಲು ನಮ್ಮ ನೀರು ತಮಿಳರ ಹಕ್ಕಾಗಿದೆ ಎಂದು ಛೇಡಿಸಿದರು.ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ನಿರಾಂತಕವಾಗಿ ನಡೆಯುತ್ತಿದೆ. ಇದರ ಪರಿಣಾಮ ಈ ಹಿಂದೆ ಕೆ.ಆರ್.ಪೇಟೆಯ ಒಬ್ಬ ಬಾಲಕನ ಕೊಲೆಯಾಗಿತ್ತು. ಬೆಟ್ಟಿಂಗ್ ದಂಧೆಯಿಂದ ಯುವ ಸಮುದಾಯ ಹಾಳಾಗುತ್ತಿದ್ದರೂ ಅದನ್ನು ನೋಡಿಕೊಂಡು ರಾಜ್ಯ ಸರ್ಕಾರ ಕುಳಿತಿದೆ. ಇಂತಹ ದರಿದ್ರ ಸರ್ಕಾರ ನಿಮಗೆ ಬೇಕಾ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ. ರೈತರ ಬೆಳೆ ಸಂರಕ್ಷಣೆಗೆ ನೀರು ಬಿಡುಗಡೆ ಮಾಡಿಲ್ಲ. ಜಿಲ್ಲೆಯ ರೈತರ ಗದ್ದೆಗಳು ನೀರಿಲ್ಲದೆ ಒಣಗಿ ನಿಂತಿವೆ. ಜಿಲ್ಲೆಗೆ ಕುಮಾರಣ್ಣ ಯಾರು ಎಂದು ಪ್ರಶ್ನಿಸುವವರು ಜಿಲ್ಲೆಯ ರೈತರ ಬಗ್ಗೆ ಕನಿಷ್ಠ ಕಾಳಜಿ ತೋರಿಸಿದ್ದರೆ ಒಣಗಿ ನಿಂತಿರುವ ಕಬ್ಬಿನ ಬೆಳೆಯನ್ನು ರೈತರು ಸಂರಕ್ಷಿಸಿಕೊಳ್ಳುತ್ತಿದ್ದರು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದರು.
ಈ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಹೆಚ್ಚು ಒತ್ತು ನೀಡಿದೆ. ಮಂಡ್ಯ ಜಿಲ್ಲೆಯ ಜನತೆಯ ಬದುಕಿಗೆ ಕೊಳ್ಳಿ ಇಟ್ಟಿದೆ. ಮೈತ್ರಿ ಸರ್ಕಾರದಲ್ಲಿ ನಾನು ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂದು ತೆಗೆದು ನೋಡಲಿ. ಜಿಲ್ಲೆಗೆ ಹೆಚ್ಚು ಅನುದಾನ ನೀಡಿದರೆ ಮಂಡ್ಯ ಬಜೆಟ್ ಎಂದು ಟೀಕಿಸಿದ ಕಾಂಗ್ರೆಸ್ಸಿಗರಿಗೆ ಈಗ ಮತ ಕೇಳಲು ಯಾವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ವಿ.ಸಿ ನಾಲೆ ಆಧುನೀಕರಣಕ್ಕೆ ಅಗತ್ಯ ಹಣ ನೀಡಿದವನು ನಾನು. ರೈತ ಸಮುದಾಯಕ್ಕೆ ತೊಂದರೆಯಾಗದಂತೆ ನಾಲೆ ನೀರು ನಿಲ್ಲಿಸದೆ ಕಾಮಗಾರಿ ನಡೆಸುವಂತೆ ನಾನು ಸೂಚಿಸಿದ್ದೆ. ಈಗ ರಾಜ್ಯ ಸರ್ಕಾರ ನಾಲಾ ಆಧುನೀಕರಣದ ಹೆಸರಿನಲ್ಲಿ ವಿ.ಸಿ ನಾಲೆಯಲ್ಲಿ ನೀರು ನಿಲ್ಲಿಸಿ ರೈತರಿಗೆ ತೊಂದರೆ ಕೊಟ್ಟಿದೆ. ನಾಲೆ ಅಧುನೀಕರಣದ ಗುತ್ತಿಗೆದಾರ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು. ಗುತ್ತಿಗೆದಾರನ ರೈತ ಹಿತ ನಿಮ್ಮ ಕಣ್ಣಮುಂದೆಯೇ ಇದೆ ಎಂದರು.