ಕನ್ನಡಪ್ರಭ ವಾರ್ತೆ ಮಂಡ್ಯ
ನಾಲೆ ಅಭಿವೃದ್ಧಿ ಮಾಡಲು ದುಡ್ಡಿಲ್ಲ ಎಂದು ಹೇಳುವವರು ರೈತರ ವಿರೋಧದ ನಡುವೆ ನೂರಾರು ಕೋಟಿ ಖರ್ಚು ಮಾಡಿ ಕಾವೇರಿ ಆರತಿ ಮಾಡಲು ಮುಂದಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಎಸ್.ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಿದರೆ ಪರಿಸರ ಹಾಳಾಗುತ್ತದೆ ಎಂದು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾನೂ ಕೂಡ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತೇನೆ ಎಂದರು.
ಕಾವೇರಿ ಆರತಿಯನ್ನು ಪ್ರಚಾರ, ಆಡಂಬರಕ್ಕೆ ಮಾಡೋದಲ್ಲ. ಉದ್ಯೋಗ ಸೃಷ್ಟಿಯನ್ನು ಬೇರೆ ಜಾಗದಲ್ಲಿ ಮಾಡಲಿ, ಮೊದಲು ಡ್ಯಾಂ ರಕ್ಷಣೆ ಮುಖ್ಯ. ನಂತರ ಬೇರೆಯದು. ರೈತರ ಮನವೊಲಿಸಿ ಬೇಕಿದ್ದರೆ ಅಲ್ಲಿ ಕಾವೇರಿ ಆರತಿ ಮಾಡಲಿ ಎಂದರು.ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಹತ್ಯೆ ಮಾಡಿದವರು ಯಾರು. ಡಿಸಿಎಂ ಡಿ.ಕೆ.ಶಿವಕುಮಾರ್ ನಾನಲ್ಲ ಎನ್ನುತ್ತಾರೆ. ಮುಖ್ಯಮಂತ್ರಿಗಳು ನಾನಲ್ಲಾ ಎನ್ನುತ್ತಾರೆ. ಮತ್ಯಾರು ಮಾಡಿದವರು. ಯಾರೇ ಆದರೂ ಅವರಿಗೆ ಜನರ ಶಾಪ ತಟ್ಟೇ ತಟ್ಟುತ್ತೆ ಎಂದು ಕಿಡಿಕಾರಿದರು.
ಗುಜರಾತ್ ವಿಮಾನ ದುರಂತ ಪ್ರಕರಣ ಹೃದಯ ಕಲಕುವ ಘಟನೆ. ಗುಜರಾತ್ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಈ ಘಟನೆಯಿಂದ ಇಡೀ ದೇಶ ದಿಗ್ಭ್ರಮೆಗೊಂಡಿದೆ. ತನಿಖೆ ಬಳಿಕ ಉಗ್ರ ಕೃತ್ಯವೇ ಎಂಬುದು ಗೊತ್ತಾಗುತ್ತೆ. ಉಗ್ರ ಕೃತ್ಯವೆಂದು ತನಿಖೆಗೂ ಮುನ್ನ ಹೇಳೋದು ಸರಿಯಲ್ಲ. ಸತ್ಯಾಂಶ ಹೊರಬಂದ ನಂತರ ಅದರ ಬಗ್ಗೆ ಪ್ರತಿಕ್ರಿಯೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಾಳೆ ಮಂಡ್ಯ ವಿವಿ ಘಟಿಕೋತ್ಸವ
ಮಂಡ್ಯ: ಸುಭಾಷ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜೂ.14ರಂದು ಮಂಡ್ಯ ವಿಶ್ವವಿದ್ಯಾನಿಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಹಾಗೂ ಮಂಡ್ಯ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಮಂಡ್ಯ ವಿವಿ ಸಹಕುಲಾಧಿಪತಿ ಡಾ.ಎಂ.ಸಿ ಸುಧಾಕರ್ ಉಪಸ್ಥಿತಿ ವಹಿಸಲಿದ್ದಾರೆ. ಎನ್.ಎಸ್.ಎಚ್.ಎಂ ನಾಲೆಡ್ಜ್ ಕ್ಯಾಂಪಸ್ ನ ನಿರ್ದೇಶಕರು ಹಾಗೂ ಕೊಲ್ಕತ್ತಾ, ಪಶ್ಚಿಮ ಬಂಗಾಳ ಮತ್ತು ಎಡುಕೇಟರ್ ಅಫಿಲಿಯೇಟ್ ಮೆಂಬರ್ ಅಮೆರಿಕನ್ ಅಸ್ಟ್ರೋನಾಮಿಕಲ್ ಸೊಸೈಟಿಯ ಪ್ರೊ.ಸೌಮೇಂದ್ರನಾಥ್ ಬಂದೋಪಾಧ್ಯಾಯ ಅತಿಥಿಗಳಾಗಿ ಆಗಮಿಸಲಿದ್ದಾರೆ.