ಜನ ಸೇವೆಗೆ ನಾನು ಸದಾ ಸಿದ್ಧ

KannadaprabhaNewsNetwork | Published : Aug 1, 2024 1:59 AM

ಸಾರಾಂಶ

ಕಳೆದ ೫೦ ವರ್ಷಗಳ ಸಾರ್ವಜನಿಕ ಸೇವೆಯಲ್ಲಿ ಎಲ್ಲ ಜನರಿಗೂ ಅನುಕೂಲವಾಗಲು ಬೇಕಾಗಿರುವ ಎಲ್ಲ ಕೆಲಸ ಕಾರ್ಯಗಳನ್ನು ನನಗೆ ತಿಳಿದ ಮಟ್ಟಿಗೆ ಮಾಡುತ್ತ ಬಂದಿದ್ದೇನೆ. ಜನ ಸೇವೆಗೆ ನಾನು ಸದಾ ಸಿದ್ಧ ಎಂದು ಮಾಜಿ ಸಚಿವ, ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಕಳೆದ ೫೦ ವರ್ಷಗಳ ಸಾರ್ವಜನಿಕ ಸೇವೆಯಲ್ಲಿ ಎಲ್ಲ ಜನರಿಗೂ ಅನುಕೂಲವಾಗಲು ಬೇಕಾಗಿರುವ ಎಲ್ಲ ಕೆಲಸ ಕಾರ್ಯಗಳನ್ನು ನನಗೆ ತಿಳಿದ ಮಟ್ಟಿಗೆ ಮಾಡುತ್ತ ಬಂದಿದ್ದೇನೆ. ಜನ ಸೇವೆಗೆ ನಾನು ಸದಾ ಸಿದ್ಧ ಎಂದು ಮಾಜಿ ಸಚಿವ, ಎಸ್‌.ಆರ್‌.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್.ಪಾಟೀಲ ತಿಳಿಸಿದರು.

ತಾಲೂಕಿನ ಬಾಡಗಂಡಿ ಗ್ರಾಮದ ಎಸ್‌.ಆರ್‌.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌.ಆರ್‌.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಕೇಂದ್ರದಲ್ಲಿ ಎರಡು ಬ್ಯಾಂಕ್‌ಗಳನ್ನು ಸ್ಥಾಪಿಸಿ ಅವುಗಳಿಂದ ಜನರಿಗೆ ಅನುಕೂಲವಾಗಲೆಂದು ಹಲವಾರು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಮತ್ತು ರಾಜಕೀಯವಾಗಿ ಸರ್ಕಾರದಿಂದ ಸಾಮಾನ್ಯ ಜನರಿಗೆ ಅನುಕೂಲವಾಗುವ ಎಂತಹ ಯೋಜನೆ ಇದ್ದರೂ ಅದನ್ನು ಶೀಘ್ರಗತಿಯಲ್ಲಿ ಮಾಡಿದ್ದೇನೆ. ಅಲ್ಲದೇ ಕೃಷ್ಣಾ ನದಿ ತಟದಲ್ಲಿ ನೂತನವಾಗಿ ಮೆಡಿಕಲ್ ಕಾಲೇಜು ಆರಂಭ ಮಾಡುವುದರ ಜತೆಗೆ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎಂದು ಎಲ್ಲ ರೀತಿಯ ಚಿಕಿತ್ಸೆಗೆ ಸಿದ್ಧತೆ ಮಾಡಲಾಗಿದೆ. ಈ ವೈದ್ಯಕೀಯ ಕಾಲೇಜು ಆರಂಭ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡು ನಮಗೆ ಸಹಕರಿಸಿ ಪರವಾನಿಗೆ ನೀಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸುಮಾರು ೪೦ ಎಕರೆ ಪ್ರದೇಶದಲ್ಲಿ ೨೦೦೯ರಲ್ಲಿ ಎಸ್‌.ಆರ್‌.ಪಾಟೀಲ ಶಿಕ್ಷಣ ಪ್ರತಿಷ್ಠಾನ ಸ್ಥಾಪನೆ ಮಾಡಿ ಎಲ್‌ಕೆಜಿಯಿಂದ ಪದವಿವರಿಗೂ ಶಿಕ್ಷಣ ಸಿಗುವಂತೆ ಮಾಡಲಾಗಿತ್ತು. ಸದ್ಯ ಇಲ್ಲಿ ಎಲ್‌ಕೆಜಿಯಿಂದ ಎಂಬಿಬಿಎಸ್‌ವರಿಗೂ ಪದವಿ ಸಿಗುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿನ ೨ ಮೆಡಿಕಲ್ ಕಾಲೇಜುಗಳಲ್ಲಿ ಬಾಡಗಂಡಿ ಗ್ರಾಮದ್ದು ಒಂದಾಗಿದೆ. ಇಲ್ಲಿ ಸುಮಾರು ೨೪೦ ತಜ್ಞ ವೈದ್ಯರು ತಮ್ಮ ಸೇವೆ ನೀಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮನೆ, ಆಸ್ತಿಪಾಸ್ತಿಯನ್ನು ತ್ಯಾಗ ಮಾಡಿದ ಸಂತ್ರಸ್ತರಿದ್ದು, ಅಂತಹ ಸಂತ್ರಸ್ತರ ಬದುಕಿಗೆ ಬೇಕಿರುವ ಶಿಕ್ಷಣ, ಆರೋಗ್ಯ ಸಿಗಬೇಕು ಎನ್ನುವ ಗುರಿಯೊಂದಿಗೆ ಸಂತ್ರಸ್ತರ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ಅವರ ಸಮಸ್ಯೆಗಳನ್ನು ಬಗೆಹರಿಸಲು ಸದಾಸಿದ್ಧನಾಗಿ ನಿಲ್ಲುವೆ ಎಂದರು.

ರಾಜಕೀಯ ಹಿನ್ನೆಡೆಯಿಂದಲೇ ಕಾಲೇಜು ಆರಂಭ:

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲ. ಅದರಿಂದ ಯಾವ ಕೆಲಸವು ಆಗುವುದಿಲ್ಲ. ರಾಜಕೀಯ ಚುನಾವಣಾ ಸಂದರ್ಭದ ಮಾತ್ರವಿರಬೇಕು. ನಂತರ ಎಲ್ಲರೂ ಅಭಿವೃದ್ಧಿಗೆ ಬದ್ಧರಾಗಬೇಕು. ರಾಜಕೀಯದಲ್ಲಿ ನನಗೂ ಸ್ವಲ್ಪ ಹಿನ್ನೆಡೆಯಾಗಿದ್ದರ ಪರಿಣಾಮ ಇಂದು ಜನರಿಗಾಗಿ ವೈದ್ಯಕೀಯ ಆಸ್ಪತ್ರೆ ಸಿಗುವಂತೆ ಮಾಡಿದೆ. ಜತೆಗೆ ಕಳೆದ ಹಲವಾರು ತಿಂಗಳುಗಳಿಂದ ಹಲವಾರು ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಈ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು ೪೦೦ ಹಳ್ಳಿಗಳ ಜನರು ಇದರ ಉಪಯೋಗ ಪಡೆದುಕೊಂಡಿವೆ. ಸುಮಾರು ೩.೫೦ ಲಕ್ಷ ಜನರಿಗೆ ಉಚಿತ ಚಿಕಿತ್ಸೆ ನೀಡಿ ಸುಮಾರು ೩ ಸಾವಿರಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಲಾಗಿದೆ. ಅಂದಾಜು ₹೭ ಕೋಟಿದಷ್ಟು ಉಚಿತ ಔಷಧ ವಿತರಣೆ ಮಾಡಲಾಗಿದೆ. ಆರೈಕೆ ಆದವರ ಆಶೀರ್ವಾದದಿಂದ ನನಗೆ ವೈದ್ಯಕೀಯ ಕಾಲೇಜಿಗೆ ಅನುಮತಿ ಸಿಕ್ಕಿದೆ ಎಂದು ಹೇಳಿದರು.

ಎಲ್ಲರಿಗೂ ಧನ್ಯವಾದ:

ಸಂಸದ ಪಿ.ಸಿ.ಗದ್ದಿಗೌಡರ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಆರೋಗ್ಯ ಸಚಿವರೊಂದಿಗೆ ಮಾತನಾಡಿ, ಇಲ್ಲಿ ಆಸ್ಪತ್ರೆ ಮಂಜೂರು ಮಾಡುವಂತೆ ಮಾಡಲಾಗಿದೆ. ಇಲ್ಲಿ ಎಲ್ಲರ ಸಹಾಯ ಸಹಕಾರ ಸಿಕ್ಕಿದ್ದು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಸಂಸ್ಥೆಗಿಂತ ದೇಶ ದೊಡ್ಡದು ಎಂಬ ಭಾವನೆಯೊಂದಿಗೆ ಸದಾ ಕಾಲ ಜನರ ಸೇವೆಗಾಗಿ ಇದ್ದು ಇಲ್ಲಿಯವರಿಗೆ ಇಷ್ಟು ದಿನ ಮಾಡಿದ್ದು ಮರೆತು ಮತ್ತೆ ಹೊಸದಾಗಿ ನಮ್ಮ ಜನರಿಗೆ ನಾಡಿಗೆ ಏನು ಮಾಡಬಹುವುದು ಎನ್ನುವುದನ್ನು ಗಮನಿಸುತ್ತೇನೆ ಎಂದರು.

---

ಬಾಕ್ಸ್‌

ಕಾಲೇಜಿಗಾಗಿ ದುಡಿದವರಿಗೆ ಸತ್ಕಾರ

ಸಮಾರಂಭದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಕೆಲಸಗಳಿಗೆ ನಿರಂತರ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿದ ಅಧಿಕಾರಿಗಳಿಗೆ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ, ಗುತ್ತಿಗೆದಾರರಿಗೂ ಗೌರವಿಸಿ ಸತ್ಕರಿಸಲಾಯಿತು. ಸಾವಿರಾರು ಜನರು ಸೇರಿದ್ದ ಜಲನಿರೋದಕ ವೇದಿಕೆಯಲ್ಲಿ ಚಪ್ಪಾಳೆಯ ಸುರಿಮಳೆ ಸದಾ ಕಾಲ ಕೇಳುತ್ತಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರಿಗೂ ವಿಶೇಷ ಉಪಹಾರ, ಭೋಜನ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ೨೧೮ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ನೋಡುಗರ ಗಮನ ಸೆಳೆಯಿತು.

----

ಕಾಲೇಜು ಆವರಣದಲ್ಲಿ ನಿಮ್ಮನ್ನು

ಹೆತ್ತವರ ಮಂದಿರ ಉದ್ಘಾಟನೆ

ವೈದ್ಯಕೀಯ ಕಾಲೇಜು ಆವರಣದಲ್ಲಿ "ನಿಮ್ಮನ್ನು ಹೆತ್ತವರು ಮಂದಿರ " ಉದ್ಘಾಟನೆ ಮಾಡಲಾಗಿದೆ. ನನ್ನ ಕಲ್ಪನೆಯಲ್ಲಿ ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ. ಎಂತಹ ರೋಗವಿದ್ದರೂ ತಂದೆ ತಾಯಿ ನಮಸ್ಕರಿಸಿದರೆ ಅದು ದೂರವಾಗಲಿದೆ ಎನ್ನುವುದು ನಂಬಿ ಆ ದೇವಸ್ಥಾನದಲ್ಲಿ ಯಾರ ತಂದೆ ತಾಯಿಯನ್ನು ಹೊಲದ ರೀತಿಯ ಎರಡು ಮೂರ್ತಿಗಳನ್ನು ಮಾಡಲಾಗಿದೆ. ಎಲ್ಲರಿಗೂ ಅವರ ಅವರ ತಂದೆ-ತಾಯಿ ಆಶೀರ್ವಾದ ಸಿಗಲಿ ಎನ್ನುವ ಉದ್ದೇಶ ಹೊಂದಲಾಗಿದೆ. ಈ ಆಸ್ಪತ್ರೆಯಲ್ಲಿ ಎಲ್ಲರೂ ಒಂದೇ ಇಲ್ಲಿ ಯಾವುದೇ ಜಾತಿ, ಮತ ಅಂತಸ್ತುಗಳಿಗೆ ಅವಕಾಶವಿಲ್ಲ. ಎಲ್ಲರಿಗೂ ಸಮಾನ ಚಿಕಿತ್ಸೆ ಸಿಕ್ಕು ಬೇಗ ಗುಣಮುಖರಾಗಬೇಕು ಎನ್ನುವ ಆಶಯದೊಂದಿಗೆ ಇದನ್ನು ಈ ಭಾಗದ ಜನತೆಗೆ ಅರ್ಪಿಸುತ್ತಿದ್ದೇನೆ. ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಎಸ್‌.ಆರ್‌.ಪಾಟೀಲ ಮನವಿ ಮಾಡಿದರು.

----

----

ಕೋಟ್‌

ಕಳೆದ ೫೦ ವರ್ಷಗಳಿಂದ ನನ್ನ ಹುಟ್ಟು ಹಬ್ಬಕ್ಕೆ ಜನರು ಏನಾದರೂ ಕಾಣಿಕೆ, ಹಾರು, ಶಾಲು ತರುತ್ತಿದ್ದರು. ಈ ಬಾರಿಯ ನನ್ನ ೭೫ನೇ ವರ್ಷದ ಹುಟ್ಟುಹಬ್ಬಕ್ಕೆ ನಾನು ಅವಳಿ ಜಿಲ್ಲೆಯ ಹಾಗೂ ನಾಡಿನ ಜನತೆಗಾಗಿ ಆಸ್ಪತ್ರೆಯನ್ನು ಕಾಣಿಕೆಯಾಗಿ ನೀಡುತ್ತಿದ್ದೇನೆ.

-ಎಸ್‌.ಆರ್.ಪಾಟೀಲ ಮಾಜಿ ಸಚಿವ, ಎಸ್‌.ಆರ್‌.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥಾಪಕ ಅಧ್ಯಕ್ಷ

Share this article