ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆ ಎಂ.ರಾಮಪ್ಪ ಹಕ್ಕೊತ್ತಾಯ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಉದ್ದವಾಗುತ್ತಾ ಸಾಗಿದ್ದು, ಸಚಿವ ಆರ್.ಬಿ.ತಿಮ್ಮಪೂರ ಪುತ್ರ ವಿನಯ್ ಚಿತ್ರದುರ್ಗ ಜಿಲ್ಲೆಯ ಮಠಗಳ ಭೇಟಿ ಮಾಡಿಕೊಂಡು ಹೋದ ಬೆನ್ನಲ್ಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆ ಎಂ.ರಾಮಪ್ಪ ನಂಗೂ ಲೋಕಸಭೆಗೆ ಟಿಕೆಟ್ ಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ, ಮೈಸೂರು ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಈ ಮೊದಲು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಕಳೆದ ಬಾರಿಯೂ ಲೋಕಸಭೆಗೆ ಟಿಕೆಟ್ ಕೇಳಿದ್ದೆ. ಈ ಬಾರಿ ಪಕ್ಷ ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸವಿದೆ ಎಂದರು. ಐಎಎಸ್, ಐಪಿಎಸ್, ಕೆಎಎಸ್ ನಲ್ಲಿ ಜಿಲ್ಲೆಯಿಂದ ತೇರ್ಗಡೆಯಾಗುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದೆ. ತರಬೇತಿ ಕೇಂದ್ರ ಆರಂಭಿಸಿ ಇಲ್ಲಿನ ಯುವಕರಿಗೆ ನೆರವಾಗುವ ನಿಟ್ಟಿನಲ್ಲಿ ಆಲೋಚನೆಗಳ ಮಾಡಲಾಗಿಲ್ಲ. ಅಭಿವೃದ್ಧಿ ರಾಜಕಾರಣ ದೂರ ಉಳಿದಿದೆ. ಬರಪೀಡಿತ ಪ್ರದೇಶಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕೆಂಬ ಆಸೆಯಿಟ್ಟುಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ ಎಂದು ಹೇಳಿದರು. ಹಿಂದೆ ಇಂಧನ ಸಚಿವರಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾವಗಡ ಬಳಿ ಎರಡು ಸಾವಿರ ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡದೆ ಹೋಗಿದ್ದರೆ ಆ ಭಾಗದ ರೈತರು ಉಳಿಯುತ್ತಿರಲಿಲ್ಲ. ಈಗಿನ ಇಂಧನ ಸಚಿವ ಕೆ.ಜೆ.ಜಾರ್ಜ್ 1200 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ತೀರ್ಮಾನಿಸಿದ್ದಾರೆ. ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಸೌರ ವಿದ್ಯುತ್ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲೆಯ ಮೊಳಕಾಲ್ಮುರು ಅತ್ಯಂತ ಹಿಂದುಳಿದ ಪ್ರದೇಶ. ಅಲ್ಲಿಗೆ ಕೈಗಾರಿಕೆಗಳನ್ನು ತರುವ ಆಸೆಯಿದೆ. ಅದಕ್ಕಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸುವ ಗುರಿಯಿಟ್ಟುಕೊಂಡಿದ್ದೇನೆ. ಪಕ್ಷದ ವರಿಷ್ಠರು ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್ ನವಾಜ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಧಾ ಇದ್ದರು. ಬಾಕ್ಸ್...ಚಿತ್ರದುರ್ಗಕ್ಕೆ ನಾರಾಯಣಸ್ವಾಮಿ ಕೊಡುಗೆ ಏನು?