ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಇನ್ನು ಮೂರೂವರೆ ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಅವರು ಸಿಎಂ ಆಗಿರುವುದರಿಂದ ನನಗೇನೂ ಲಾಭ ಇಲ್ಲ. ಆದರೆ, ರಾಜ್ಯದ ಅಭಿವೃದ್ಧಿಗಾಗಿ, ರಾಜ್ಯದ ಹಿತಕ್ಕಾಗಿ ಅವರೇ ಸಿಎಂ ಆಗಿರಬೇಕು ಎನ್ನುವುದು ನನ್ನ ಕಳಕಳಿ. ಪ್ರಾಸಿಕ್ಯೂಷನ್‌ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರು ಸಿಎಂ ಆಗಿಯೇ ಮುಂದುವರಿಯುತ್ತಾರೆ ಎಂದರು.
ಆದರೂ ಸಿಎಂ ಆಗಬೇಕು ಎನ್ನುವ ಕುರಿತು ನನ್ನ ಕ್ಷೇತ್ರದವರು ಪ್ರೀತಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ನನಗೂ ಸಿಎಂ ಆಗುವ ಬಯಕೆ ಇರುವುದರಲ್ಲಿ ತಪ್ಪೇನಿದೆ? ನೀವೇ ಹೇಳಿ ಎಂದು ಪ್ರಶ್ನೆ ಮಾಡಿದರು.ಹಿರಿಯರಾದ ಆರ್.ವಿ. ದೇಶಪಾಂಡೆ, ಸಚಿವರಾದ ಸತೀಶ್ ಜಾರಕೀಹೊಳಿ, ಎಂ.ಬಿ. ಪಾಟೀಲ್ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದರು.
ಕಲ್ಯಾಣ ಕರ್ನಾಟಕದಲ್ಲಿಯೂ ನಾನೇ ಹಿರಿಯ ಶಾಸಕನಿದ್ದು, ಆದ್ಯತೆ ದೊರೆಯಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಇದಕ್ಕೆ ಪಕ್ಷದ ವರಿಷ್ಠರ, ಹೈಕಮಾಂಡ್ ನಾಯಕರ ಅಭಿಪ್ರಾಯ ಮುಖ್ಯವಾಗಿರುತ್ತದೆ. ಇದಕ್ಕಿಂತ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಅವರ ಆಶೀರ್ವಾದ ದೊರೆತರೆ ಮಾತ್ರ ಇದು ಸಾಧ್ಯ ಎಂದರು.
ಒಕ್ಕಲಿಗರಲ್ಲಿ ಸಿಎಂ ಸ್ಥಾನಕ್ಕೆ ಅನೇಕರು ಪೈಪೋಟಿ ಇದ್ದರೂ ಫ್ರಂಟ್‌ಲೈನ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಇದ್ದಾರೆ ಎಂದರು.ಯಾರಿಗೆ ಯಾವಾಗ ಲಾಟರಿ ಹೊಡೆಯುತ್ತದೆ ಎಂದು ಗೊತ್ತಾಗುವುದಿಲ್ಲ. ಹಾಗೆಯೇ ನನಗೂ ಲಾಟರಿ ಹೊಡೆದರೆ ಮುಖ್ಯಮಂತ್ರಿ ಆಗುತ್ತೇನೆ ಎಂದರು.ರಾಯರಡ್ಡಿ ಪರ ಅಭಿಯಾನ...
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸಿಎಂ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ. ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡ್ರ, ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕಿನ ಶಾಸಕರಾಗಿರುವ ಮತ್ತು ಅತ್ಯಂತ ಹಿರಿಯರಾಗಿರುವ ಬಸವರಾಜ ರಾಯರಡ್ಡಿ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಇದನ್ನು ಹಲವರು ಶೇರ್ ಮಾಡಿದ್ದರೆ, ಇನ್ನು ಅನೇಕರು ರಾಯರಡ್ಡಿ ಸಿಎಂ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.