ನಾನು ಸಿಎಂ, ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ: ಯತ್ನಾಳ್‌

KannadaprabhaNewsNetwork | Published : Feb 10, 2025 1:47 AM

ಸಾರಾಂಶ

ಬಿಜೆಪಿಯಲ್ಲಿ ನಾನೂ ಮುಖ್ಯಮಂತ್ರಿ ಅಭ್ಯರ್ಥಿ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದೇನೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿಯಲ್ಲಿ ನಾನೂ ಮುಖ್ಯಮಂತ್ರಿ ಅಭ್ಯರ್ಥಿ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದೇನೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಗೃಹಪ್ರವೇಶಕ್ಕೆ ನಾವೆಲ್ಲಾ ಹೋಗುತ್ತಿದ್ದೇವೆ. ರಾಷ್ಟ್ರೀಯ ನಾಯಕರು ಸಿಗುತ್ತಾರೋ-ಇಲ್ಲವೋ ಪ್ರಯತ್ನ ಮುಂದುವರಿಸುತ್ತೇವೆ. ನನಗೆ ಎಷ್ಟು ಅಪಮಾನವಾಗಿದೆಯೆಂದರೆ ಬೇರೆಯವರಾಗಿದ್ದರೆ ಉರುಳು ಹಾಕಿಕೊಳ್ಳುತ್ತಿದ್ದರು, ನಾವು ಹಾಕಿಕೊಂಡಿಲ್ಲ ಅಷ್ಟೇ ಎಂದು ಯತ್ನಾಳ್‌ ಕಿಡಿಕಾರಿದರು.

ವಿಜಯೇಂದ್ರ ಪರ, ನಮ್ಮ ವಿರುದ್ಧ ಮಾಧ್ಯಮದಲ್ಲಿ ವರದಿ ಬರುತ್ತಿವೆ. ದೆಹಲಿಯಲ್ಲಿ ಯತ್ನಾಳ್‌ಗೆ ಅಪಮಾನ, ನಾಯಕರು ಭೇಟಿಯಾಗಿಲ್ಲ ಎಂದು ವರದಿ ಮಾಡುತ್ತಾರೆ ಎಂದು ಮಾಧ್ಯಮ ವಿರುದ್ಧವೂ ಹರಿಹಾಯ್ದ ಯತ್ನಾಳ್‌, ಶನಿವಾರ ರಾತ್ರಿಯೇ ರಮೇಶ್‌ ಜಾರಕಿಹೊಳಿ ಸೇರಿ ಇತರ ರೆಬೆಲ್‌ ನಾಯಕರೊಂದಿಗೆ ಬಂದು ವಾಸ್ತವ್ಯ ಹೂಡಿದ್ದರಾದರೂ ದಾವಣಗೆರೆ ಜಿಎಂಐಟಿ ಗೆಸ್ಟ್‌ ಹೌಸ್‌ನಲ್ಲಿ ಸಭೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಪಕ್ಷ ನಾಯಕನಾಗಿ ಆರ್‌.ಅಶೋಕ್‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ, ಬೆಂಗಳೂರು ಅಧಿವೇಶನ, ರಾಜ್ಯದ ಸೂಕ್ಷ್ಮ ವಿಚಾರಗಳ ವೇಳೆ ನಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಯತ್ನಾಳ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ಶಾಸಕರಿಗೆ ಒಂದಿಷ್ಟು ಅಸಮಾಧಾನ ಇರಬಹುದು. ಆದರೆ, ನಮಗಂತೂ ಆರ್.ಅಶೋಕ್‌ ಬಗ್ಗೆ ಯಾವುದೇ ಅಸಮಾಧಾನವೂ ಇಲ್ಲ ಎಂದರು.ರಾಜಕಾರಣದಲ್ಲಿ ಜೀ ಹುಜೂರ್ ಅಂತಾ ಇರಬಾರದು. ನಾನು ಹಾಗೂ ಸಹಕಾರಿ ಸಚಿವ ರಾಜಣ್ಣ ಒಂದೇ ಜಾತಿಯವರು. ನಾವು ನೇರವಾಗಿ ಮಾತನಾಡುವವರು ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ರಾಮುಲು ಬಿಜೆಪಿ ರಾಜ್ಯಾಧ್ಯಕ್ಷರಾದರೆ ನನಗೆ ಅಭ್ಯಂತರ ಇಲ್ಲ ಎಂದರು.

ದಾವಣಗೆರೆಯಲ್ಲಿ ರೆಬೆಲ್‌ ನಾಯಕರ ಸಭೆ:ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಬಂಡೆದ್ದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಮತ್ತು ಅವರ ತಂಡದ ನಾಯಕರು ಶನಿವಾರ ರಾತ್ರಿ ಕೇಂದ್ರದ ಮಾಜಿ ಸಚಿವ ಡಾ। ಜಿ.ಎಂ.ಸಿದ್ದೇಶ್ವರ ಕುಟುಂಬದ ಒಡೆತನದ ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಮಹತ್ವದ ಸಭೆ ನಡೆಸಿದ್ದಾರೆನ್ನಲಾಗಿದೆ. ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿಗೆ ಶನಿವಾರ ರಾತ್ರಿಯೇ ಬಂದು ವಾಸ್ತವ್ಯ ಮಾಡಿರುವ ಬಸವನಗೌಡ ಪಾಟೀಲ್ ಯತ್ನಾಳ, ರಮೇಶ ಜಾರಕಿಹೊಳಿ ಸೇರಿದಂತೆ ರೆಬಲ್ ನಾಯಕರು ಭಾನುವಾರ ಬೆಳಗ್ಗೆಯೂ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಈ ನಾಯಕರು ಸೋಮವಾರ (ಫೆ.10) ದೆಹಲಿಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮನೆಯಲ್ಲಿ ಪೂಜಾ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಇಲ್ಲಿಂದಲೆ ದೆಹಲಿಗೆ ತೆರಳಲಿದ್ದಾರೆ. ನಂತರ ಬಿಜೆಪಿ ಕೇಂದ್ರ ನಾಯಕರ ಭೇಟಿ ಮಾಡುವ ಕಾರ್ಯಕ್ರಮವಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಬಸವನಗೌಡ ಪಾಟೀಲ್ ಯತ್ನಾಳ್ ಮಾತ್ರ ದಾವಗೆರೆಯಲ್ಲಿ ಯಾವುದೇ ಸಭೆ ಮಾಡಿಲ್ಲ ಎಂದು ಹೇಳಿದ್ದಾರೆ.

Share this article