ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ: ರುದ್ರಪ್ಪ ಲಮಾಣಿ

KannadaprabhaNewsNetwork |  
Published : Oct 30, 2025, 02:00 AM IST
29ಎಚ್‌ವಿಆರ್‌5-ರುದ್ರಪ್ಪ ಲಮಾಣಿ | Kannada Prabha

ಸಾರಾಂಶ

ಲಂಬಾಣಿ ಸಮುದಾಯದ ಏಕೈಕ ಶಾಸಕ ನಾನು. ಹಾಗಾಗಿ ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು. ಈಗ ವಿಧಾನಸಭೆ ಉಪ ಸಭಾಧ್ಯಕ್ಷರಾಗಿ, ಮುಂದಿನ ಅವಧಿಯಲ್ಲಿ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಹಾಗಾಗಿ, ಅವರ ಮೇಲೆ ವಿಶ್ವಾಸ ಇಟ್ಟಿದ್ದೇನೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಎರಡೂವರೆ ವರ್ಷದ ಹಿಂದೆಯೇ ನನಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಮುಂದಿನ ಸಂಪುಟ ವಿಸ್ತರಣೆ ವೇಳೆ ಅವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರ್ಜೇವಾಲಾ ಸೇರಿದಂತೆ ಹೈಕಮಾಂಡ್ ಭರವಸೆ ನೀಡಿತ್ತು. ಆದ್ದರಿಂದ ಸಂಪುಟ ಪುನಾರಚನೆ ವೇಳೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಬಾಣಿ ಸಮುದಾಯದ ಏಕೈಕ ಶಾಸಕ ನಾನು. ಹಾಗಾಗಿ ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು. ಈಗ ವಿಧಾನಸಭೆ ಉಪ ಸಭಾಧ್ಯಕ್ಷರಾಗಿ, ಮುಂದಿನ ಅವಧಿಯಲ್ಲಿ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಹಾಗಾಗಿ, ಅವರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಸಿಎಂ ಬದಲಾವಣೆ, ಅಧಿಕಾರ ಹಸ್ತಾಂತರ ಕುರಿತು ಯಾವ ಮಾತುಕತೆ ಆಗಿದೆ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾತುಕತೆ ಆಗಿದೆ ಎಂದು ಒಂದು ಕಡೆಯವರು ಹೇಳುತ್ತಾರೆ. ಆಗಿಲ್ಲ ಎಂದು ಮತ್ತೊಬ್ಬರು ಹೇಳುತ್ತಾರೆ. ಆ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ. ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಿ.ಕೆ. ಶಿವಕುಮಾರ ಅವರು ಹೈಕಮಾಂಡ್ ಹೇಳಿದಂತೆ ಎನ್ನುತ್ತಿದ್ದಾರೆ. ಏನಾಗುತ್ತೋ ಕಾದು ನೋಡೋಣ. ಎಲ್ಲವೂ ಹೈಕಮಾಂಡ್ ನಿರ್ಧಾರದ ಮೇಲಿದೆ ಎಂದರು.

ನಿರಂತರ ಮಳೆ ಕಾರಣಗಳಿಂದ ನನ್ನ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿ ವಿಳಂಬವಾಗಿದೆ. 15ಕ್ಕೂ ಹೆಚ್ಚು ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದೇನೆ. ಮಳೆ ನಿಂತ ತಕ್ಷಣ ಗುಣಮಟ್ಟದ ಕಾಮಗಾರಿ ನಡೆಯಲಿದೆ. ಕಂಚಾರಗಟ್ಟಿ ಬಳಿ ₹150 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಈಗಾಗಲೇ ₹50 ಕೋಟಿ ಬಿಡುಗಡೆಯಾಗಿದೆ. ಈ ಬೇಸಿಗೆ ಕಾಲದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಶಾಂತಿನಗರದ ಜಿ ಪ್ಲಸ್ ವಸತಿ ಮನೆಗಳ ಕಾಮಗಾರಿ ಕಳಪೆಯಾಗಿದೆ ಎಂದು ಲೋಕಾಯುಕ್ತರ ಬಳಿ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆಯಾಗಲಿ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು. ಕಳಸೂರ ವರದಾ ನದಿಗೆ ಸೇತುವೆ ನಿರ್ಮಿಸುವ ಕುರಿತು ಚಿಂತನೆ ನಡೆದಿದೆ. ಹಿಂದೆ ರಸ್ತೆ ಕಾಮಗಾರಿಗಳೇ ಆಗಿಲ್ಲ. ಅಲ್ಲಿ ಕೇವಲ 8 ಅಡಿ ಇರುವ ರಸ್ತೆ ಇದೆ. ಜಾಗ ಸಮಸ್ಯೆ ಇದೆ. ಎಲ್ಲ ಬಗೆಹರಿಸಿ, ನನ್ನ ಅವಧಿಯಲ್ಲೇ ಸೇತುವೆ ನಿರ್ಮಿಸಲಾಗುವುದು. ಇದರಿಂದ 30 ಹಳ್ಳಿಗಳಿಗೆ ಅನುಕೂಲ ಆಗಲಿದೆ. ದೇವಗಿರಿ- ಸವಣೂರ ರಸ್ತೆಯನ್ನೂ ಮಾಡಲಾಗುವುದು ಎಂದು ಹೇಳಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು